ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವನನ್ನು ಕೈಕಾಲು ಕಟ್ಟಿ ವಿವಸ್ತ್ರಗೊಳಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ನಡೆದಿದೆ.
ಆನೇಕಲ್ ತಾಲ್ಲೂಕಿನ ಯಾರಂಡಹಳ್ಳಿಯಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಅಂದಾಜು 40 ವರ್ಷ ವಯಸ್ಸಿನವರು ಎಂದು ಊಹಿಸಲಾಗಿದೆ.
ಜನನಿಬಿಡ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಲೆಯಾಗಿದ್ದು, ಪುಷ್ಟ ಎಂಬುವವರಿಗೆ ಈ ಜಾಗ ಸೇರಿತ್ತು ಎಂದು ಹೇಳಲಾಗಿದೆ. ಕಳೆದ ಐದಾರು ದಿನಗಳ ಹಿಂದೆ ಹತ್ಯೆ ನಡೆದಿಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಪರಿಶೀಲನೆ ನಡೆಸಿ ಕೃತ್ಯ ಎಸಗಿದವರನ್ನು ಶೀಘ್ರದಲ್ಲೇ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.