ಬೆಂಗಳೂರು ಗ್ರಾಮಾಂತರ: 'ಬೊಗಳೋ ನಾಯಿ ಕಚ್ಚಲ್ಲ, ಕಚ್ಚುವ ನಾಯಿ ಬೊಗಳಲ್ಲ' ಎಂಬ ಮಾತಿದೆ. ಇಲ್ಲೊಬ್ಬ ವ್ಯಕ್ತಿ ಬೊಗಳಿದ ಮಾತ್ರಕ್ಕೆ ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿ ಬಂದೂಕಿನಿಂದ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ. ರಾಕಿ ಹೆಸರಿನ ನಾಯಿ ಗುಂಡೇಟಿಗೆ ಬಲಿಯಾಗಿದೆ.
ಇಂಥದ್ದೊಂದು ವಿಲಕ್ಷಣ ಘಟನೆ ದೊಡ್ಡಬಳ್ಳಾಪುರ ತಾಲೂಕು ಮಾದಗೊಂಡನಹಳ್ಳಿಯಲ್ಲಿ ಭಾನುವಾರ ನಡೆದಿದೆ, ಈ ಪ್ರಕರಣ ಗ್ರಾಮಾಂತರ ಠಾಣೆ ಮೆಟ್ಟಿಲೇರಿದೆ.
ಹಂದಿ ಸಾಕಣೆ ಮಾಡುವ ಕೃಷ್ಣಪ್ಪ ನಾಯಿ ಹಂತಕ. ಇದೇ ಗ್ರಾಮದ ಹರೀಶ್ ಎಂಬುವರಿಗೆ ಸೇರಿದ ನಾಯಿ ‘ರಾಕಿ’ ಭಾನುವಾರ ಹೊಲದ ಕಡೆ ಹೋಗುತ್ತಿದ್ದ ಕೃಷ್ಣಪ್ಪನನ್ನು ಕಂಡು ಬೊಗಳಿದೆ ಎನ್ನಲಾಗಿದ್ದು, ಕೋಪಗೊಂಡ ಕೃಷ್ಣಪ್ಪ ಅದನ್ನು ಹೊಡೆಯಲು ಮುಂದಾಗಿದ್ದಾನೆ. ಆತನಿಂದ ತಪ್ಪಿಸಿಕೊಂಡು ಓಡಿದರೂ ನಾಯಿಯ ಬೆನ್ನಟ್ಟಿದ ಆತ ಹೊಲದಲ್ಲಿ ಗುಂಡಿಟ್ಟು ಕೊಂದುಹಾಕಿದ್ದಾನೆ ಎನ್ನಲಾಗಿದೆ.
ನಾಯಿ ಬೊಗಳಿದ್ದಕ್ಕೆ ಹತ್ಯೆ ಮಾಡಿಲ್ಲ, ಅದು ನನ್ನ ಮಗನನ್ನು ಕಚ್ಚಲು ಬಂತು, ಆಗ ಓಡಿಸಲು ಹೋದೆ. ಆದರೆ ತಿರುಗಿ ಬಿದ್ದು ನನ್ನನ್ನೇ ಕಚ್ಚಲು ಬಂತು, ಆದ್ದರಿಂದ ಬೇರೆ ವಿಧಿಯಿಲ್ಲದೆ ಗುಂಡು ಹಾರಿಸಬೇಕಾಯಿತು ಎಂದು ಕೃಷ್ಣಪ್ಪ ಠಾಣೆಯಲ್ಲಿ ಹೇಳಿಕೆ ನೀಡಿದ್ದಾನೆ.
ಟ್ರಸ್ಟ್‌ನಿಂದ ಅಂತ್ಯಕ್ರಿಯೆ: ವಿಷಯ ತಿಳಿದ ರಾಜ್ಯ ಪ್ರಾಣಿ ಪಕ್ಷಿ ದಾಸೋಹ ಸೇವಾ ಟ್ರಸ್ಟ್ ಅಧ್ಯಕ್ಷ ಮುನಿರಾಜು ನಾಯಿಯ ಅಂತ್ಯಕ್ರಿಯೆ ನೆರವೇರಿಸಿ ಹಂತಕನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.