ಜಿಲ್ಲೆ

ಮರದಿಂದ ಬಿದ್ದು ಮರಣ: 50 ಅಡಿ ಮೇಲಿನಿಂದ ಕೆಳಕ್ಕೆ ಬಿದ್ದು ಕೈಕಾಲು ಮುರಿತ, ಸ್ಥಳದಲ್ಲೇ ಸಾವು

ಆನೇಕಲ್: ವ್ಯಕ್ತಿಯೊಬ್ಬರು ತೆಂಗಿನ ಮರವೇರಿ ಗರಿ ಕತ್ತರಿಸುವಾಗ ಕೆಳಕ್ಕೆ ಬಿದ್ದು ಮರಣ ಹೊಂದಿದ್ದಾರೆ. ಮೇಲಿನಿಂದ ಕೆಳಕ್ಕೆ ಬಿದ್ದ ರಭಸಕ್ಕೆ ಕೈಕಾಲುಗಳು ಮುರಿದುಹೋಗಿದ್ದಲ್ಲದೆ, ತಲೆಗೂ ಗಂಭೀರ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಕೋಣನಕುಂಟೆ ನಿವಾಸಿ ಕಾಂತರಾಜು (28) ಮೃತಪಟ್ಟವರು. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಬಳಿ ಈ ದುರಂತ ಸಂಭವಿಸಿದೆ. ತೋಟದಲ್ಲಿನ ತೆಂಗಿನಮರಗಳಲ್ಲಿನ ಗರಿ ಕತ್ತರಿಸಲು ಇಂಡ್ಲವಾಡಿ ಗ್ರಾಮದ ಮಹಾದೇವಪ್ಪ ಎಂಬುವವರು ಕಾಂತರಾಜುವನ್ನು ಕರೆತಂದಿದ್ದರು. ಮರವೇರಿದ್ದ ಕಾಂತರಾಜು ಗರಿ ಕತ್ತರಿಸುವಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.

ಸುಮಾರು 50 ಅಡಿ ಎತ್ತರದಿಂದ ಬಿದ್ದಿದ್ದರಿಂದ, ಆ ರಭಸಕ್ಕೆ ಕೈಕಾಲುಗಳು ಮುರಿದುಹೋಗಿವೆ. ಮಾತ್ರವಲ್ಲ ತಲೆಗೂ ಗಂಭೀರ ಹೊಡೆತ ಬಿದ್ದಿದ್ದು, ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನೇಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತನ ಶವವನ್ನು ಆನೇಕಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಆನೇಕಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.