ಶಿವಮೊಗ್ಗ: ಆಕೆ ಸ್ನೇಹಿತನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದಳು. ಆದರೆ ಆಕೆಯ ತಮ್ಮ ಅದೇ ಸಿಟ್ಟಿಗೆ ಅವಳನ್ನೇ ಕೊಲೆ ಮಾಡಿದ. ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಥದ್ದೊಂದು ದುರಂತ ತುಮಕೂರಿನಿಂದ ಶಿವಮೊಗ್ಗದವರೆಗೂ ವ್ಯಾಪಿಸಿದೆ.
ಶಿವಮೊಗ್ಗದ ಸರ್ಕಾರಿ ಬಸ್ ನಿಲ್ದಾಣ ಸಮೀಪದ ಖಾಸಗಿ ಲಾಡ್ಜ್ನಲ್ಲಿ ನಡೆದ ಆತ್ಮಹತ್ಯೆಯ ಪ್ರಕರಣ ಈ ಎಲ್ಲ ವಿಷಯವನ್ನೂ ಬೆಳಕಿಗೆ ತಂದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಸೂರಗೊಂಡನಹಳ್ಳಿ ಗ್ರಾಮದ ಮಂಜುನಾಥ್ (26) ಈ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಸೆ.13ರಂದೇ ಬಂದಿದ್ದು, ಖಾಸಗಿ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದ. ನಿನ್ನೆ ಈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವ ಕೊಳೆತು ವಾಸನೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಸ್ಥಳ ಪರಿಶೀಲನೆಗೆ ಬಂದ ಪೊಲೀಸರಿಗೆ ಡೆತ್ನೋಟ್ ಸಿಕ್ಕಿದ್ದು, ಅದರಲ್ಲಿ ಈತ ಒಂದಷ್ಟು ವಿಷಯವನ್ನು ಬರೆದಿಟ್ಟಿದ್ದ.
ತನ್ನ ಅಕ್ಕ ಸುಧಾ ಸ್ನೇಹಿತನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದು, ಆ ಕುರಿತ ಕೋಪದಿಂದ ತಾನು ಅಕ್ಕನನ್ನೇ ಕೊಲೆ ಮಾಡಿದ್ದಾಗಿ ಬರೆದುಕೊಂಡಿರುವ ಮಂಜುನಾಥ್, ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಆತ್ಮಹತ್ಯೆಗೆ ಕಾರಣ ಏನು ಎಂಬುದು ನಿಖರವಾಗಿ ಇನ್ನಷ್ಟೇ ತಿಳಿದುಬರಬೇಕಿದೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಆತ್ಮಹತ್ಯೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.