ಬೆಳಗಾವಿ: ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯೊಬ್ಬರ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡು ಮಿದುಳೇ ನಿಷ್ಕ್ರಿಯಗೊಂಡಿತ್ತು. ಆದರೆ ಈ ಸಾವಿನ ನೋವಲ್ಲೂ ಮನೆಯವರು ಮಾನವೀಯತೆ ಮೆರೆದಿದ್ದು, ಹೃದಯ, ಮೂತ್ರಪಿಂಡ, ಪಿತ್ತಜನಕಾಂಗ, ಕಣ್ಣುಗಳನ್ನು ದಾನ ಮಾಡಿದ್ದಾರೆ.
ಬೆಳಗಾವಿಯ ಮಹಾಬಲೇಶ್ವರ ನಗರದ ನಿವಾಸಿ ಉಮೇಶ್ ಬಸವಣ್ಣಿ ದಂಡಗಿ (51) ಸಾವಿಗೀಡಾದ ವ್ಯಕ್ತಿ. ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಇವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಾಖಲಿಸಲಾಗಿತ್ತು.
ಆದರೆ ಉಮೇಶ್ ಅವರ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಬ್ರೇನ್ ಡೆಡ್ ಎಂದು ಘೋಷಿಸಲಾಗಿತ್ತು. ಬಳಿಕ ಅವರ ಅಂಗಾಂಗಗಳ ದಾನಕ್ಕೆ ನಿರ್ಧರಿಸಲಾಗಿದ್ದು, ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ಒಂದು ಮೂತ್ರಪಿಂಡ, ಹುಬ್ಬಳ್ಳಿ ತತ್ವಾದರ್ಶ ಆಸ್ಪತ್ರೆಗೆ ಒಂದು ಮೂತ್ರಪಿಂಡವನ್ನು ಆ್ಯಂಬುಲೆನ್ಸ್ ಮೂಲಕ ರವಾನೆ ಮಾಡಲಾಗಿತ್ತು.
ಹೃದಯವನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲೇ ಇರುವ ಹೃದ್ರೋಗಿಯೊಬ್ಬರಿಗೆ ದಾನ ಮಾಡಲಾಯಿತು. ಪಿತ್ತಜನಕಾಂಗವನ್ನು ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಕಳಿಸಲಾಗಿದ್ದು, ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮಾಡಿ ಅಂಗಾಂಗ ತಲುಪಿಸಲಾಯಿತು.