ಪುತ್ತೂರು ಗ್ರಾಮಾಂತರ: ಸರ್ವೆ ಗ್ರಾಮದ ದರ್ಬೆ ಮತ್ತು ರೆಂಜಿಲಾಡಿ ಎಂಬಲ್ಲಿರುವ ಪ್ರತ್ಯೇಕ ಎರಡು ಅಂಗನವಾಡಿ ಕೇಂದ್ರಗಳಿಂದ ಗುರುವಾರ ರಾತ್ರಿ ಅಡುಗೆ ಪಾತ್ರೆ ಕಳವು ಮಾಡಿರುವ ಆರೋಪಿಯನ್ನು ಸಂಪ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ನಿವಾಸಿ, ಪ್ರಸ್ತುತ ಸರ್ವೆ ಗ್ರಾಮದ ರೆಂಜಲಾಡಿಯಲ್ಲಿ ವಾಸ್ತವ್ಯವಿದ್ದ ಮನೋಹರ ಆಚಾರ್ಯ ಬಂಧಿತ ಆರೋಪಿ.
ಗುರುವಾರ ರಾತ್ರಿ ದರ್ಬೆ ಅಂಗನವಾಡಿ ಕೇಂದ್ರದ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿ ಅಡುಗೆ ಪಾತ್ರೆಗಳನ್ನು ಕಳವು ಮಾಡಲಾಗಿತ್ತು. ರೆಂಜಲಾಡಿ ಅಂಗನವಾಡಿ ಕೇಂದ್ರದ ಜಗಲಿಯಲ್ಲಿ ಇಟ್ಟಿದ್ದ ಬಕೆಟ್ ಮತ್ತು ಕೊಡಪಾನ ಕಳವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಪುತ್ತೂರು ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ.
ಮದ್ಯವ್ಯಸನಿಯಾಗಿರುವ ಆರೋಪಿ ಮನೋಹರ್, ಕುಡಿತಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಎಚ್ಚರಿಕೆ ನೀಡಿ, ಏ.21ರಂದು ಮತ್ತೆ ಹಾಜರಾಗುವಂತೆ ಸೂಚಿಸಿ ಬಿಡುಗಡೆಗೊಳಿಸಲಾಗಿದೆ.