ಜಿಲ್ಲೆ

ರಾಮಾಯಣದಿಂದ ನೀತಿ ಅರಿವು : ಭವಾನಿ ಶಂಕರ್ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮುಂಬರುವ ದಿನಗಳಲ್ಲಿ ನಾಲ್ಕು ವಸತಿ ಶಾಲೆ ತೆರೆಯಲಿವೆ. ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ನಡೆಸುತ್ತಿದ್ದು, ಬೆಳ್ತಂಗಡಿ ಶಿಕ್ಷಣದ ಹಬ್ ಆಗುತ್ತಿದೆ. ಉತ್ತಮ ಸೌಲಭ್ಯ, ಸುಸಜ್ಜಿತ ಕಟ್ಟಡಗಳನ್ನು ಒಳಗೊಂಡ ವಿದ್ಯಾರ್ಥಿ ನಿಲಯ ತಾಲೂಕಿನಲ್ಲಿದೆ. ವಿದ್ಯಾರ್ಥಿಗಳು ರಾಮಾಯಣ ಕಥಾನಕವನ್ನು ಓದಿ ಅದರಲ್ಲಿರುವ ನೀತಿ ಅರಿತುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಹೇಳಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಬೆಳ್ತಂಗಡಿ ತಾಪಂ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.

ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಕಾಲೇಜು ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ್ ಎನ್.ಎಸ್., ಪಪಂ ಮುಖ್ಯಾಧಿಕಾರಿ ರಾಜೇಶ್ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಲಿತಾಂಶ ಗಳಿಸಿದ ಏಳು ವಸತಿ ನಿಲಯಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಅವರನ್ನು ಗೌರವಿಸಲಾಯಿತು. ಸಿಬ್ಬಂದಿ ಆಶಾ ಪೂರ್ಣಿಮಾ ಸನ್ಮಾನ ಪತ್ರ ವಾಚಿಸಿದರು. ಮುಂಡಾಜೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯಶಿಕ್ಷಕ ಮುರಳಿಧರ್ ಸ್ವಾಗತಿಸಿದರು. ವಸತಿ ನಿಲಯ ಮೇಲ್ವಿಚಾರಕಿ ಡಾ.ಅರ್ಷಿಯಾ ವಂದಿಸಿದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

ರಾಮಯಣ, ಮಹಾಭಾರತ ಜೀವಂತವಾಗಿ ಇಂದಿಗೂ ಉಳಿದಿವೆ. ನಮ್ಮ ಸಮಯದಲ್ಲಿ ಬಿಡುವು ಮಾಡಿಕೊಂಡು ರಾಮಾಯಣ ಓದಿಕೊಳ್ಳಬೇಕು. ಪುಸ್ತಕ ಜ್ಞಾನದೊಂದಿಗೆ ಹೊರ ಜಗತ್ತಿನ ಜ್ಞಾನದ ಬೆಳಕನ್ನು ಕಾಣಬೇಕು. ಶ್ರೀ ರಾಮಚಂದ್ರನ ಪರಿಕಲ್ಪನೆಯಲ್ಲಿ ವಾಲ್ಮೀಕಿ ರಾಮಾಯಣ ಕೃತಿ ರಚಿಸಿದರು. ನಮ್ಮ ಮಾತೃ ಭಾಷೆಯಾದ ತುಳು ಭಾಷೆಯಲ್ಲಿ ಮಂದಾರ ಕೇಶವ ಭಟ್ ರಚಿಸಿರುವ ಮಂದಾರ ರಾಮಾಯಣ ಓದಿ. ರಾಮಾಯಣದ ಅನೇಕ ಪಾತ್ರಗಳು ಪ್ರಮುಖ ತ್ಯಾಗ ಮಾಡಿದ್ದು, ನಾವು ನಮ್ಮ ಬದುಕಿನೊಳಗೆ ಸಣ್ಣ ಪುಟ್ಟ ತ್ಯಾಗ ಮಾಡಬೇಕು. ಡಾ.ಯೋಗೀಶ್ ಕೈರೋಡಿ ಆಳ್ವಾಸ್ ಕಾಲೇಜು ಪ್ರಾಧ್ಯಾಪಕ