ಜಿಲ್ಲೆ

ಅ.3ಕ್ಕೆ ಮಹಾರಾಣಿ ಕ್ಸಸ್ಟರ್ ವಿವಿ ಘಟಿಕೋತ್ಸವ; ಡಾ.ಬಿ.ಟಿ.ರುದ್ರೇಶ್, ಭಾರತಿ ವಿಷ್ಣುವರ್ಧನ್ ಸೇರಿ 6 ಮಂದಿಗೆ ಗೌರವ ಡಾಕ್ಟರೇಟ್

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ 2 ಮತ್ತು 3ನೇ ವಾರ್ಷಿಕ ಘಟಿಕೋತ್ಸವವು ಅ.3ರಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕುಲಪತಿ ಡಾ.ಟಿ.ಎಂ. ಮಂಜುನಾಥ್, 2022ರಲ್ಲಿ ಆರಂಭವಾದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು 2023ರಲ್ಲಿ ನಡೆದಿದ್ದು, 2024ರಲ್ಲಿ ಕಾರಣಾಂತರದಿಂದ ಘಟಿಕೋತ್ಸವವನ್ನು ನಡೆಸಿರಲಿಲ್ಲ. ಆದ್ದರಿಂದ ಈ ವರ್ಷ 2 ಮತ್ತು 3ನೇ ವರ್ಷದ ಘಟಿಕೋತ್ಸವವನ್ನು ಒಟ್ಟಿಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ರ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಿವಾದಿ ಚಿಂತಕಿ ಸಬಿಹಾ ಭೂಮಿಗೌಡ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಪ್ರೊ.ಎಸ್.ಸತೀಶ್ ಉಪಸ್ಥಿತರಿದ್ದರು.

ಗೌರವ ಡಾಕ್ಟರೇಟ್ ಮತ್ತು ಪದವಿ ಪ್ರದಾನ

ಖ್ಯಾತ ಹೋಮಿಯೋಪಥಿ ವೈದ್ಯರಾದ ಡಾ.ಬಿ.ಟಿ.ರುದ್ರೇಶ್, ಹೆಸರಾಂತ ನಟಿ ಭಾರತಿ ವಿಷ್ಣುವರ್ಧನ್, ಶಿಕ್ಷಣ ತಜ್ಞೆ ಡಾ.ಎಚ್.ಎನ್.ಉಷಾ, ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಡಾ.ಕಿರಣ್ ಮಜುಂದಾರ್ ಷಾ, ಲೇಖಕಿ ದು.ಸರಸ್ವತಿ, ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಒಟ್ಟು 6 ಮಂದಿಗೆ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

2023 ಮತ್ತು 2024ನೇ ಸಾಲಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ, ರ‌್ಯಾಂಕ್ ಮತ್ತು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರಮಾಣಪತ್ರ ವಿತರಣೆ ಮಾಡಲಾಗುವುದು. ಪದವಿಯಲ್ಲಿ 2555, ಸ್ನಾತಕೋತ್ತರ ಪದವಿಯಲ್ಲಿ 1018 ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ. ಇವರಲ್ಲಿ 107 ವಿದ್ಯಾರ್ಥಿಗಳು ರ‌್ಯಾಂಕ್ ಮತ್ತು 52 ವಿದ್ಯಾರ್ಥಿಗಳು ಸುವರ್ಣ ಪದಕ ಪಡೆದಿದ್ದಾರೆ.