ಜಿಲ್ಲೆ

ಮದ್ವೆ ಬಳಿಕವೂ ಸಂಬಂಧಿ ಜತೆ ಲವ್; ಪ್ರೀತಿಯನ್ನು ಬಿಡಲಾಗದೆ ಮನೆ ಬಿಟ್ಟುಬಂದವರು ಪ್ರಾಣವನ್ನೇ ಬಿಟ್ಟರು!

ಬೆಂಗಳೂರು: ಮದುವೆಯ ಬಳಿಕವೂ ಸಂಬಂಧಿಯೊಂದಿಗೆ ಪ್ರೀತಿಯನ್ನು ಮುಂದುವರಿಸಿದ್ದ ಯುವತಿ, ಆತನೊಂದಿಗೆ ಮನೆ ಬಿಟ್ಟು ಬಂದಿದ್ದಲ್ಲದೆ, ಬಳಿಕ ಇಬ್ಬರೂ ಜೊತೆಯಾಗಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ರಾಯಚೂರು ಮೂಲದ ಬಸವರಾಜ್(28), ಜ್ಯೋತಿ (26) ಮೃತಪಟ್ಟವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಮದುವೆಯಾದರೂ ಬಸವರಾಜ್ ಒಡನಾಟ ಬಿಡಲಾಗದ ಜ್ಯೋತಿ ಆತನೊಂದಿಗೆ ಬೆಂಗಳೂರಿಗೆ ಬಂದಿದ್ದಳು.

ಇವರು 20 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ತಾವಿಬ್ಬರೂ ಗಂಡ-ಹೆಂಡತಿ ಎಂದು ಹೇಳಿ ದೇವನಹಳ್ಳಿಯ ಶಾಂತಿನಗರದಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಅದೇನಾಯಿತೋ ಗೊತ್ತಿಲ್ಲ, ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಮನೆಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಮನೆಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.