ಜಿಲ್ಲೆ

ಲಾಟರಿ ಬಹುಮಾನ ವದಂತಿಗೆ ಟೈಲರ್ ಸುಸ್ತು : ಅಭಿನಂದನೆ, ಸಹಾಯಯಾಚನೆಯ ಕರೆಗಳಿಗೆ ಉತ್ತರಿಸಿ ಹೈರಾಣ

ಸೌಮ್ಯ ಆರ್

ಉಪ್ಪಿನಂಗಡಿ: ಇಲ್ಲಿನ ಟೈಲರ್ ಒಬ್ಬರಿಗೆ ಕೇರಳ ರಾಜ್ಯ ಲಾಟರಿಯ ಒಂದು ಕೋಟಿ ರೂ. ಬಹುಮಾನ ಬಂದಿದೆ ಎಂಬ ಸುದ್ದಿ ಹರಡಿ ಅಭಿನಂದನೆ, ಸಹಾಯ ಯಾಚನೆಯ ಕರೆಗೆ ಟೈಲರ್ ಹೈರಾಣಾದ ಘಟನೆ ವರದಿಯಾಗಿದೆ.

ರಥಬೀದಿಯಲ್ಲಿರುವ ಗಣಪತಿ ಮಠದ ಬಳಿಯ ಟೈಲರ್ ಕೂಸಪ್ಪ ಎಂಬುವರಿಗೆ ಲಾಟರಿ ಬಂದಿದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿತ್ತು. 30 ಲಕ್ಷ ರೂ. ತೆರಿಗೆ ಕಡಿತಗೊಂಡು 70 ಲಕ್ಷ ರೂ. ಖಾತೆಗೆ ಜಮೆಯಾಗಿದೆ ಎಂಬ ವಿವರವೂ ಸೇರಿಸಲ್ಪಟ್ಟು ಬಾಯಿಯಿಂದ ಬಾಯಿಗೆ ಹರಡಿತ್ತು. ಈ ಬಗ್ಗೆ ಸತ್ಯಾಂಶ ಶೋಧಿಸಿ ವರದಿ ಮಾಡುವ ಸಲುವಾಗಿ ಸುದ್ದಿಗಾರರು ಭೇಟಿಯಾದಾಗಲೇ ಸತ್ಯ ಅನಾವರಣಗೊಂಡಿದೆ.

ತನಗೆ ಯಾವ ಲಾಟರಿಯೂ ಲಭಿಸಿಲ್ಲ. ಈ ಸುಳ್ಳು ಸುದ್ದಿ ಸೃಷ್ಟಿಯಾದ ನಂತರ ಒಂದಿನಿತೂ ನೆಮ್ಮದಿ ಇಲ್ಲ. ಕ್ಷಣ ಕ್ಷಣಕ್ಕೂ ಅಭಿನಂದನೆ ಮತ್ತು ಸಹಾಯ ಯಾಚಿಸಿ ಬರುವ ಕರೆಗೆ ಉತ್ತರಿಸುವುದೇ ಸಾಕಾಗುತ್ತಿದೆ. ಬಹುಮಾನ ನನಗೆ ಬಂದಿಲ್ಲ ಎಂಬ ಸತ್ಯ ಹೇಳಿದರೂ ನಾನು ಸುಳ್ಳು ಹೇಳುತ್ತಿದ್ದೇನೆ ಎಂದೇ ಭಾವಿಸುವ ಮಂದಿ ಬೇಸರದಿಂದ ಕರೆ ಕಡಿತಗೊಳಿಸುತ್ತಿದ್ದಾರೆ ಎಂದು ಟೈಲರ್ ಬೇಸರ ವ್ಯಕ್ತಪಡಿಸುತ್ತಾರೆ. ಯಾರು, ಯಾಕಾಗಿ ಈ ವದಂತಿ ಸೃಷ್ಟಿಸಿದ್ದಾರೆ ಎನ್ನುವುದು ನಿಗೂಢವಾಗಿದೆ.