ಬೆಂಗಳೂರು: ನಗರದೊಳಗೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಿದ ಪರಿಣಾಮ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ, ಕರೆ ನೀಡಿದ್ದ ಅನಿದಿಷ್ಟಾವಧಿ ಮುಷ್ಕರವನ್ನು ಗುರುವಾರ ವಾಪಸ್ ಪಡೆದುಕೊಳ್ಳಲಾಗಿದೆ.
ಪ್ರತಿ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ನಗರದಲ್ಲಿ ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧ ವಿರೋಧಿಸಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಲಾರಿ ಮಾಲೀಕರ ಮತ್ತು ಒಕ್ಕೂಟದ ಪದಾಧಿಕಾರಿಗಳ ಜತೆ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಎ.ಸಲೀಂ ಸಭೆ ನಡೆಸಿದ್ದರು.
ಸಭೆಯಲ್ಲಿ ಎರಡು ಬಾರಿ ನಡೆದ ಮಾತುಕತೆ ವಿಫಲವಾಗಿತ್ತು. ಮೂರನೇ ಸುತ್ತಿನ ಮಾತುಕತೆ ಸಫಲವಾದ ಪರಿಣಾಮ 7 ಟನ್ ಸರಕು ಸೇರಿ 11 ಟನ್ ಸಾಮರ್ಥ್ಯದ ಲಘು ವಾಹನಗಳು ನಗರದೊಳಗೆ ಸಂಚಾರಕ್ಕೆ ಅವಕಾಶಕ್ಕೆ ಅನುಮತಿ ನೀಡಲಾಯಿತು. ಇದರಿಂದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಹೇಳಿದ್ದಾರೆ.
ಟೋಲ್ ಹೆಸರಿನಲ್ಲಿ ಬೇಕಾಬಿಟ್ಟಿ ಶುಲ್ಕ ಮತ್ತು ಜಿಎಸ್‌ಟಿ ವಸೂಲಿ ಮಾಡಲಾಗುತ್ತಿದೆ. ರಸ್ತೆ ಸುರಕ್ಷತೆ ಹೆಸರಿನಲ್ಲಿ ಅನಗತ್ಯ ದಂಡ ಮೊತ್ತ ವಿಧಿಸಲಾಗುತ್ತಿದೆ. ತಪಾಸಣೆ ಹೆಸರಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಿರುಕುಳ ನೀಡುತ್ತಿದ್ದಾರೆ. ಗುಜರಿ ನೀತಿ, ಹಳೆಯ ವಾಹನಗಳಿಗೆ ಗ್ರೀನ್ ಟ್ಯಾಕ್ಸ್ ಹಾಗೂ ಪ್ರತಿ ವರ್ಷ ಥರ್ಡ್ ಪಾರ್ಟಿ ಇನ್ಯುರೆನ್ಸ್ ಪ್ರೀಮಿಯಂ ಹೆಚ್ಚಳ ಮಾಡಲಾಗಿದೆ. ಲೈಸೆನ್ಸ್, ಪರ್ಮಿಟ್ ಮತ್ತು ಎಫ್ಸಿ ಹೆಸರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಕಟ್ಟವಂತೆ ಕಿರುಕುಳ ನೀಡುತ್ತಿದ್ದಾರೆ. ಮೂರು ವರ್ಷಗಳಲ್ಲಿ ಪ್ರತಿ ಲೀ. ಡೀಸೆಲ್ ಮೇಲೆ ಒಟ್ಟಾರೆ 35 ರೂ. ಹೆಚ್ಚಳವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಹೆಚ್ಚುವರಿ ತೆರಿಗೆ ಹಾಕುತ್ತಿವೆ. ಇದರಿಂದ ನಮಗೆ ಹೊರೆ ಬೀಳುತ್ತಿದೆ. ಬರುವ ದಿನಗಳಲ್ಲಿ ಈ ಮೇಲಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತೊಂದು ಬಾರಿ ಪ್ರತಿಭಟನೆಗೆ ಕರೆ ನೀಡುವುದಾಗಿ ಷಣ್ಮುಗಪ್ಪ ತಿಳಿಸಿದರು. ಸಂಘದ ಕಾರ್ಯದರ್ಶಿ ಕೆ.ಎನ್.ಅಶ್ವತ್ಥ್, ಜಂಟಿ ಕಾರ್ಯದರ್ಶಿ ಮಧು ಸೇರಿ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.