ಜಿಲ್ಲೆ

ಬರ್ತ್​ ಡೇ ಸಂಭ್ರಮದಲ್ಲಿದ್ದ ನಾಲ್ವರು ದುರಂತ ಸಾವು, ಕೇಕ್​ ಕತ್ತರಿಸಿದ ದಿನವೇ ಅಟ್ಟಹಾಸ ಮೆರೆದ ಜವರಾಯ

ಬಾಗಲಕೋಟೆ: ಹುನಗುಂದದ ಬೇವಿನಮಟ್ಟಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ದುರ್ಮರಣಕ್ಕೀಡಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಚಂದ್ರಶೇಖರ ಬುಟ್ಟಾ(22), ನವೀನ್ ಸಾಕಾ( 20), ಚೆನ್ನಬಸವ ಅಂಜಿ(22), ಬಸವರಾಜ ಭಂಡಾರಿ (33) ಮೃತ ದುರ್ದೈವಿಗಳು. ಮೃತರೆಲ್ಲರೂ ಇಳಕಲ್​ನವರು.

ಬರ್ತ್ ಡೇ ಆಚರಣೆಗೆಂದು ಇವರೆಲ್ಲರೂ ಇಳಕಲ್​ನಿಂದ ಗುಳೇದಗುಡ್ಡಕ್ಕೆ ಕಾರಿನಲ್ಲಿ ಹೋಗಿದ್ದರು. ಬರ್ತ್​ ಡೇ ಸಂಭ್ರಮಾಚರಣೆಯ ಖುಷಿಯಲ್ಲೇ ವಾಪಸ್​ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಮಾರ್ಗಮಧ್ಯೆ ಬೇವಿನಮಟ್ಟಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ವಿಜಯಕುಮಾರ್ ಬಂಡಿ ಗಂಭೀರ ಗಾಯಗೊಂಡಿದ್ದಾನೆ. ಈತನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಲಾರಿ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.