ಜಿಲ್ಲೆ

ಲಾರಿ-ಬಸ್​ ನಡುವೆ ಭೀಕರ ಅಪಘಾತ: ಹೊತ್ತಿ ಉರಿದ ವಾಹನ, ಒಬ್ಬ ಸಜೀವ ದಹನ, ಖ್ಯಾತನಟಿ ಅಪಾಯದಿಂದ ಪಾರು

ಉಪ್ಪಿನಂಗಡಿ: ಕಡಬ ತಾಲೂಕಿನ ಮಣ್ಣಗುಂಡಿ ಎಂಬಲ್ಲಿ ಬುಧವಾರ ತಡರಾತ್ರಿ ಬಸ್​ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಾಹಗಳು ಬೆಂಕಿಯಲ್ಲಿ ಹೊತ್ತಿ ಉರಿದಿದ್ದು, ಲಾರಿ ಚಾಲಕ ಸಜೀವ ದಹನ ಆಗಿದ್ದಾನೆ.

ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಕ್ಯಾಂಟರ್ (ಕೆಎ 51 AF 6308)ನ ಚಾಲಕ ಮೈಸೂರಿನ ಸಂತೋಷ್(‌25) ಮೃತ ದುರ್ದೈವಿ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಕ್ಯಾಂಟರ್ ಗೂಡ್ಸ್​ ಲಾರಿ ಹಾಗೂ ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌(KA 20 AA 8078) ಮುಖಾಮುಖಿ ಡಿಕ್ಕಿಯಾಗಿವೆ. ಬಸ್​ನಲ್ಲಿ ತುಳು ಚಿತ್ರದ ಖ್ಯಾತನಟಿ ನೀಮಾರೇ ಸಹ ಇದ್ದರು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ತೀವ್ರತೆಗೆ ಎರಡೂ ವಾಹನಗಳಿಗೆ ಬೆಂಕಿ ಆವರಿಸಿದ್ದು, ಖಾಸಗಿ ಬಸ್‌ ಸಂಪೂರ್ಣ ಸುಟ್ಟು ಹೋಗಿದೆ. ಲಾರಿಯೂ ಸುಟ್ಟು ಕರಕಲಾಗಿದೆ. ಬೆಂಕಿ ತಗುಲಿದ ತಕ್ಷಣವೇ ಪ್ರಯಾಣಿಕರು ಹೊರಗೆ ಓಡಿಹೋಗಿದ್ದರಿಂದ ಹೆಚ್ಚಿನ ಅಪಾಯವಾಗಲಿಲ್ಲ. ಟ್ರಕ್‌ ಚಾಲಕ ಹೊರ ಬರಲಾರದೆ ಸ್ಥಳದಲ್ಲೇ ಲಾರಿಯಲ್ಲೇ ಸುಟ್ಟುಕರಕಲಾಗಿದ್ದಾನೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿ ನಂದಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸಹಜ ಸ್ಥಿತಿಗೆ ಬಂದಿದೆ.

ಬಸ್‌ ಚಾಲಕ ಮತ್ತು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.