ರಾಯಚೋಟಿ: ವಿಶ್ವದ ವಿಭು ಶಿವನ ಧ್ಯಾನಸ್ಥ ಮನಸ್ಸಿನ ಸಕಲ ಸಂಕಲ್ಪಗಳನ್ನೂ ನಿಖರ ನೆಲೆಯಲ್ಲಿ ಪೂರ್ಣಗೊಳಿಸಿದ ವೀರಭದ್ರನು ಶಿವನಷ್ಟೇ ಶಕ್ತಿಶಾಲಿ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.
ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ರಾಯಚೋಟಿಯ ವೀರಭದ್ರ ದೇವರ ಬ್ರಹ್ಮೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದುಷ್ಟರ ನಿಗ್ರಹ ಹಾಗೂ ಶಿಷ್ಟರ ರಕ್ಷಣೆಗೆ ವೀರಭದ್ರ ದೇವರ ಅವತಾರವಾಗಿದೆ. ಮಾನವನ ದುರಹಂಕಾರವನ್ನು ದಮನ ಮಾಡಿ ಸತ್ಯ, ಶುದ್ಧ, ಸಾತ್ವಿಕ ಸಜ್ಜನಿಕೆಯ ಉನ್ನತ ಜೀವನ ವಿಧಾನದೊಂದಿಗೆ ಮನುಕುಲವನ್ನು ಮುನ್ನಡೆಸುವಲ್ಲಿ ಅಗತ್ಯವಾದ ವಿಶಿಷ್ಟ ಶಕ್ತಿಸಂಚಯವನ್ನು ಶಿವನಿಂದ ಪಡೆದುಕೊಂಡ ಏಕೈಕ ದೈವವಾಗಿ ವೀರಭದ್ರ ಪುರಾಣಗಳಲ್ಲಿ ಗಮನಸೆಳೆದಿದ್ದಾನೆ ಎಂದು ಜಗದ್ಗುರುಗಳು ವಿವರಿಸಿದರು.
ಸಮಾರಂಭವನ್ನು ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಮಧುರಾ ಅಶೋಕಕುಮಾರ ಉದ್ಘಾಟಿಸಿದರು. ಜಮಖಂಡಿ ಕಲ್ಯಾಣಮಠದ ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ಲ ಬೃಹನ್ಮಠದ ಶ್ರೀರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ರಾಯಚೋಟಿ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿದ್ದರು. ಅಹೋರಾತ್ರಿ ವೀರಭದ್ರ ದೇವರ ಒಡಪು, ಭಕ್ತಿಗೀತೆ, ಸಾಮೂಹಿಕ ಭಜನೆ ನಡೆಯಿತು.
ಕಾರ್ಯಕ್ರಮದಲ್ಲಿ ಕಲಬುರಗಿಯ ಸಿ.ಎಂ. ಶಿವಶರಣಪ್ಪ, ಹುಬ್ಬಳ್ಳಿಯ ಗಿರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ಗುರುಮೂರ್ತಿ ಯರಗಂಬಳಿಮಠ ಮತ್ತಿತರರು ಪಾಲ್ಗೊಂಡಿದ್ದರು.