ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಶಿಲಾಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಹಾಪ್ರಸಾದಿ ಗ್ರಂಥ ಬಿಡುಗಡೆ ಮಾಡಲಾಯಿತು. ಅಭಿನವ ಗವಿಸಿದ್ಧೇಶ್ವರ ಶ್ರೀಗಳು, ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಬೂದೀಶ್ವರ ಸ್ವಾಮೀಜಿ, ಕೊಟ್ಟೂರು ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಜಗತ್ತಿನ ನಿಜವಾದ ಮಾಲೀಕ ಭಗವಂತ

ಕಮತಗಿ: ಈ ಜಗತ್ತಿನಲ್ಲಿ ವಾಸಿಸುವ ನಾವ್ಯಾರೂ ಮಾಲೀಕರಲ್ಲ. ಕೇವಲ ಬಾಡಿಗೆದಾರರಾಗಿದ್ದೇವೆ. ನಮಗೆ ಬದುಕಲು ಎಲ್ಲವನ್ನೂ ಕೊಟ್ಟಿರುವ ಆ ಭಗವಂತನೇ ಈ ಜಗತ್ತಿನ ನಿಜವಾದ ಮಾಲೀಕ ಎಂದು ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 8, 9, 11ನೇ ಪೀಠಾಧಿಕಾರಿ ಗದ್ದುಗೆಗಳ ನೂತನ ಶಿಲಾಮಂಟಪ ಲೋಕಾರ್ಪಣೆ ಹಾಗೂ ಹುಚ್ಚೇಶ್ವರ ಪೀಠ ಪರಂಪರೆಯ ಸಮಗ್ರ ದರ್ಶನದ ಮಹಾಪ್ರಸಾದಿ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮಗೆ ಎಲ್ಲವನ್ನೂ ಕೊಟ್ಟಿರುವ ಆ ಭಗವಂತನಿಗೆ ನಾವೆಲ್ಲರೂ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವುದರ ಜತೆಗೆ ನಾನು ಎಂಬ ಅಹಂಕಾರ, ಎಲ್ಲವೂ ನನ್ನಿಂದ ನಡೆಯುತ್ತದೆ ಎಂಬ ದೃಷ್ಟಿಕೋನವನ್ನು ಬದಿಗಿಟ್ಟು ಬದುಕಿದರೆ ಅವನ ಬದುಕು ಹೆಚ್ಚು ಹಸನಾಗುತ್ತದೆ ಎಂದರು.

ಮೈಸೂರು ಸುತ್ತೂರು ಶಿವರಾತ್ರೀಶ್ವರಮಠ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ನೂತನ ಶಿಲಾಮಂಟಪ ಲೋಕಾರ್ಪಣೆಗೊಳಿಸಿ ಮಾತನಾಡಿ, ಪ್ರತಿಯೊಬ್ಬರೂ ದೇವರ ಮೇಲೆ ನಂಬಿಕೆ ಇಟ್ಟು ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡರೆ ದೇವರ ಕೃಪೆ ಸದಾ ತಮ್ಮೆಲ್ಲರ ಮೇಲೆ ಇರುತ್ತದೆ.

ಹುಚ್ಚೇಶ್ವರಮಠ ಧಾರ್ಮಿಕವಾಗಿ ಬಹಳಷ್ಟು ಪ್ರಸಿದ್ಧಿ ಪಡೆದಿದೆ ಎಂದರು.

ಹೊಳೆ ಹುಚ್ಚೇಶ್ವರ ಪೀಠಪರಂಪರೆ ಕುರಿತು ಶಿಕ್ಷಕ ಶ್ರೇಯಾಂಶ ಕೋಲಾರ ಅವರು ರಚಿಸಿರುವ ಸಮಗ್ರ ದರ್ಶನದ ‘ಮಹಾಪ್ರಸಾದಿ’ ಗ್ರಂಥವನ್ನು ಎಲ್ಲ ಮಠಾಧೀಶರು ಬಿಡುಗಡೆಗೊಳಿಸಿದರು.

ಸಾನ್ನಿಧ್ಯವನ್ನು ಹೊಸಳ್ಳಿ ಬೂದೀಶ್ವರ ಸ್ವಾಮೀಜಿ, ಗಂಗಾವತಿ ಕೊಟ್ಟೂರು ಸ್ವಾಮೀಜಿ, ಉಪ್ಪಿನಬೆಟಗೇರಿ ಕುಮಾರ ವಿರುಪಾಕ್ಷ ಸ್ವಾಮೀಜಿ, ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಮುನವಳ್ಳಿ ಮುರುಘೇಂದ್ರ ಸ್ವಾಮೀಜಿ, ಕನಕಗಿರಿ ಚನ್ನಮಲ್ಲ ಸ್ವಾಮೀಜಿ, ಅಮೀನಗಡ ಪ್ರಭುಶಂಕರರಾಜೇಂದ್ರ ಸ್ವಾಮೀಜಿ, ಕೋಟೆಕಲ್ ನೀಲಕಂಠ ಶಿವಾಚಾರ್ಯರು, ಕುಂದರಗಿ ಅಮರಸಿದ್ಧೇಶ್ವರ ಶ್ರೀಗಳು, ಕುಂಟೋಜಿ ಚನ್ನವೀರ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ, ಮೆಲ್‌ಬ್ರೋ ಶುಗರ್ಸ್‌ ವ್ಯವಸ್ಥಾಪಕ ಶಿವಾನಂದ ಮೆಳ್ಳಿಗೇರಿ ಇತರರಿದ್ದರು.