

ಕಲಾದಗಿ: ಕಳೆದೊಂದು ವಾರದಿಂದ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಸಮೀಪದ ಗದ್ದನಕೇರಿ ಕ್ರಾಸ್ ಬಳಿಯ ಗದ್ದನಕೇರಿ 33 ಕೆವಿ ಹಾಗೂ ಗ್ರಾಮದ 110 ಕೆವಿ ಪ್ರಸರಣ ಕೇಂದ್ರದ ಬಳಿ ಅಪಾರ ಸಂಖ್ಯೆಯಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ತ್ರೀ ಫೇಸ್ ವಿದ್ಯುತ್ ನಿರಂತರ ಸರಬರಾಜು ಮಾಡದ ಕಾರಣ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಈ ಮೊದಲಿನಂತೆ ರಾತ್ರಿ ಮೂರು ಗಂಟೆ ಸೇರಿಸಿ ಒಟ್ಟು ಏಳು ತಾಸು ತ್ರೀ ೇಸ್ ವಿದ್ಯುತ್ ಪೂರೈಸಬೇಕು. ಸಂಜೆ 6ರಿಂದ 10 ಗಂಟೆಯವರೆಗೆ ಕೊಡುವ ಸಿಂಗಲ್ ೇಸ್ ವಿದ್ಯುತ್ ನಿಯಮಿತವಾಗಿ ಪೂರೈಸುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ರೈತರು ಒತ್ತಾಯಿಸಿದರು.
ಗದ್ದನಕೇರಿ ಕೇಂದ್ರದ ಬಳಿ: ಗದ್ದನಕೇರಿ ಕ್ರಾಸ್ ಬಳಿ ವಿಜಯಪುರ-ಹುಬ್ಬಳ್ಳಿ ಹೆದ್ದಾರಿ ಪಕ್ಕದಲ್ಲಿರುವ ಗದ್ದನಕೇರಿ 33 ಕೆವಿ ಸ್ಟೇಶನ್ ಮುಂದೆ ಪ್ರತಿಭಟನೆಗೆ ಮುಂದಾದ ರೈತರು, ಸಮಸ್ಯೆ ಬೇಗ ಬಗೆಹರಿಯುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ತೀವ್ರಗೊಳಿಸಿದರು.
ಪೊಲೀಸರ ಮಧ್ಯ ಪ್ರವೇಶ: ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪರಿಸ್ಥಿಯನ್ನು ತಿಳಿಗೊಳಿಸಿ ಹೆದ್ದಾರಿ ಬಂದ್ ತೆರವುಗೊಳಿಸಲು ಹರಸಾಹಸಪಟ್ಟರು. ಪ್ರತಿಭಟನಾಕಾರರು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಹೆದ್ದಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಬಸ್‌ಗಳನ್ನು ಬೈಪಾಸ್ ರಸ್ತೆ ಮೂಲಕ ಓಡಿಸಲು ಕ್ರಮಕೈಗೊಳ್ಳಲಾಯಿತು. ಇತರ ವಾಹನದವರು ಬಹಳ ಹೊತ್ತು ಅಲ್ಲಿಯೇ ನಿಲ್ಲಬೇಕಾಯಿತು.
ಇತ್ತ ಕಲಾದಗಿಯಲ್ಲಿ:ಬೆಳಗ್ಗೆ 10 ಗಂಟೆ ಹೊತ್ತಿಗೆ ಗ್ರಾಮದ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಮುತ್ತಿಗೆ ಹಾಕಿದ ರೈತರು, ಸಮಸ್ಯೆ ಬಗೆಹರಿಯುವವರೆಗೂ ಎಲ್ಲ ಕಡೆ ವಿದ್ಯುತ್ ಬೇಡ ಎಂದು ಒತ್ತಾಯಿಸಿ ಹೆಸ್ಕಾಂ ಸಿಬ್ಬಂದಿಯಿಂದ ಸರಬರಾಜನ್ನು ಸ್ಥಗಿತಗೊಳಿಸಿದರು. ಸಂಭಂಧಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದು ಕಾದು ಕುಳಿತರು.
ಸ್ಥಳಕ್ಕೆ ಹೆಸ್ಕಾಂ ಇಇ ಆಗಮನ: ಮಧ್ಯಾಹ್ನ 1 ಗಂಟೆ ಹೊತ್ತಿಗೆ ಗದ್ದನಕೇರಿ ಕೇಂದ್ರಕ್ಕೆ ಹಾಗೂ 2 ಗಂಟೆ ಹೊತ್ತಿಗೆ ಗ್ರಾಮದ ಕೇಂದ್ರಕ್ಕೆ ಹೆಸ್ಕಾಂ ಎಇಇ ಬಾಲಚಂದ್ರ ಹಲಗತ್ತಿ ಅವರೊಂದಿಗೆ ಧಾವಿಸಿದ ಹೆಸ್ಕಾಂ ಇಇ ಖಲೀಲ ಅಹ್ಮದ್ ಪ್ರತಿಭಟನಾಕಾರರ ಬೇಡಿಕೆ ಆಲಿಸಿದರು. ಪ್ರತಿಭಟನಾಕಾರರ ಮತ್ತು ಹೆಸ್ಕಾಂ ಇಇ ಅವರ ನಡುವೆ ಬಹುಹೊತ್ತು ಮಾತಿನ ಚಕಮಕಿ, ಸಮಜಾಯಿಷಿ, ಸಮರ್ಥನೆ ನಡೆಯಿತು. ನಂತರ ಹೆಸ್ಕಾಂ ಹಿರಿಯ ಅಧಿಕಾರಿ ಅಹ್ಮದ್, ವಿದ್ಯುತ್ ಉತ್ಪಾದನೆಯಲ್ಲಿ ಒಂದಿಷ್ಟು ತೊಂದರೆ ಇದೆ. ಅದನ್ನು ಸರಿ ಮಾಡುವ ಕೆಲಸಗಳು ನಡೆದಿವೆ. ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ಇದ್ದುದ್ದರಲ್ಲಿಯೇ ಇನ್ನು ಮುಂದೆ ತೊಂದರೆಯಾಗದಂತೆ ವಿದ್ಯುತ್ ಒದಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಗದ್ದನಕೇರಿ ಕೇಂದ್ರದ ಬಳಿ ನಡೆದ ಪ್ರತಿಭಟನೆಯಲ್ಲಿ ಗದ್ದನಕೇರಿ, ಛಬ್ಬಿ, ಯಡಹಳ್ಳಿ, ಸೊಕನಾದಗಿ, ಯಡಹಳ್ಳಿಗಳ ರೈತರು, ಕಲಾದಗಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮದ ರೈತರು ಸೇರಿದಂತೆ ಖಜ್ಜಿಡೋಣಿ, ಗೋವಿಂದಕೊಪ್ಪ, ಅಂಕಲಗಿ, ಶಾರದಾಳ, ಕಳಸಕೊಪ್ಪ, ಚಿಕ್ಕಶೆಲ್ಲಿಕೇರಿ, ಉದಗಟ್ಟಿ, ಹಿರೇಸಂಶಿ ಮುಂತಾದ ಊರುಗಳ ಕೃಷಿಕರು ಪಾಲ್ಗೊಂಡಿದ್ದರು.