ಜಿಲ್ಲೆ

ಲೋಕಾಯುಕ್ತ ಅಹವಾಲು ಸ್ವೀಕಾರ : ಬೆಳ್ತಂಗಡಿಯಲ್ಲಿ ಸಾರ್ವಜನಿಕರಿಂದ 28 ದೂರು ಸಲ್ಲಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಂದಾಯ, ತಾ.ಪಂ., ಅರಣ್ಯ, ಕೋ-ಆಪರೇಟಿವ್ ಸೊಸೈಟಿ, ಸಮಾಜ ಕಲ್ಯಾಣ, ಸರ್ವೇ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳು ಸೇರಿ ಒಟ್ಟು 28 ದೂರುಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಎರಡು ದೂರುಗಳನ್ನು ಫಾರ್ಮ್ 1, 2ರಲ್ಲಿ ರಿಜಿಸ್ಟರ್ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಇನ್ನೂ ಉಳಿದ ದೂರುಗಳನ್ನು ಕಾಲಮಿತಿಯಲ್ಲಿ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪ್ರಭಾರ ಅಧೀಕ್ಷಕ ಕುಮಾರಚಂದ್ರ ಹೇಳಿದರು.

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

ಗ್ರಾಮಮಟ್ಟದಲ್ಲಿ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸಲು ಗ್ರಾಮಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಲು ಅವಕಾಶ ಕಲ್ಪಿಸಲು ಜಿ.ಪಂ. ಸಿಇಒ ಅವರಿಗೆ ಮನವಿ ಮಾಡಲಾಗಿದೆ. ಪೂರಕ ದಾಖಲೆಗಳವುಳ್ಳ ದೂರುಗಳನ್ನು ಲೋಕಾಯುಕ್ತಗೆ ಸಲ್ಲಿಸಬಹುದು. ಸುಳ್ಳು ಕೇಸ್ ಸಲ್ಲಿಸಿದವರ ಮೇಲೆ ಕ್ರಮ ವಹಿಸಲಾಗುತ್ತದೆ ಎಂದರು.

ನಿಟ್ಟಡೆ ಗ್ರಾಮದ ಸತೀಶ್ ಪೂಜಾರಿ ಅವರು ಮನೆ ನಿವೇಶನದ ಹಕ್ಕುಪತ್ರಕ್ಕೆ ಪಹಣಿ ದಾಖಲಿಸುವಂತೆ 2023 ಮೇಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಪ್ರತ್ಯುತ್ತರ ಸಿಕ್ಕಿಲ್ಲ ಎಂದು ತಿಳಿಸಿದರು. ಪ್ಲಾಟಿಂಗ್ ಮಾಡಲು 2023ರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಆದರೆ ಇದುವರೆಗೂ ಮಾಹಿತಿ ನೀಡಿಲ್ಲ ಎಂದು ನಿಟ್ಟಡೆ ಗ್ರಾಮದ ಜನಾರ್ದನ ತಿಳಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.

ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 14 ಹಾಸ್ಟೆಲ್‌ಗಳ ಪೈಕಿ 5 ಹಾಸ್ಟೆಲ್‌ಗಳಲ್ಲಿ ಬೆಡ್ ಮತ್ತು ಕ್ವಾಟ್ ವ್ಯವಸ್ಥೆ ಇದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಜೋಸೆಫ್ ಮಾಹಿತಿ ನೀಡಿದರು.

ಡಿವೈಎಸ್ಪಿ ಸುರೇಶ್ ಕುಮಾರ್ ಪಿ., ತಾ.ಪಂ. ಇಒ ಭವಾನಿಶಂಕರ್ ಎನ್., ತಹಶೀಲ್ದಾರ್ ಪೃಥ್ವಿ ಸಾನಿಕಂ, ಇನ್‌ಸ್ಪೆಕ್ಟರ್ ಭಾರತಿ ಪಿ. ಮತ್ತು ಚಂದ್ರಶೇಖರ್ ಕೆ.ಎನ್. ಉಪಸ್ಥಿತರಿದ್ದರು. ಲೋಕಾಯುಕ್ತ ಸಿಬ್ಬಂದಿ ಮಹೇಶ್, ನಾಗಪ್ಪ, ಯತೀಶ್, ರಾಜಶೇಖರ್, ದುಂಡಪ್ಪ, ಗಂಗಣ್ಣ, ವಿವೇಕ್, ತಾಲೂಕುಮಟ್ಟದ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

ಹಿಂಬರಹ ನೀಡದೆ ಕರ್ತವ್ಯ ಲೋಪ

ಲಾಯಿಲ ಗ್ರಾ.ಪಂ. ಪಕ್ಕದಲ್ಲಿ ಅಜಾದ್ ಬೀಡಿ ಕಂಪನಿ 2009ರಿಂದ ಕಾರ್ಯಾಚರಿಸುತ್ತಿದ್ದು, ಈ ಕಟ್ಟಡಕ್ಕೆ ಸರಿಯಾದ ದಾಖಲೆಗಳು, ಪಂಚಾಯಿತಿ ಆದೇಶಗಳು, ಸಂಬಂಧಪಟ್ಟ ಇಲಾಖೆಯ ಅನುಮತಿ ಪತ್ರ ಇಲ್ಲ. ಮೇ 12ರಂದು ಲಾಲ ಪಿಡಿಒಗೆ ಕಂಪನಿ ಮತ್ತು ತಪ್ಪಿತಸ್ಥರ ಲೋಕಾಯುಕ್ತ ಅಹವಾಲು ಸ್ವೀಕಾರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಆದರೆ ಈವರೆಗೆ ಪಿಡಿಒ ಶ್ರೀನಿವಾಸ ಡಿ.ಪಿ. ಕ್ರಮ ಕೈಗೊಳ್ಳದೆ ಹಿಂಬರಹ ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಇವರ ಮೇಲೆ ಲೋಕಾಯುಕ್ತ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಕಾನೂನು ಕ್ರಮ ವಹಿಸುವಂತೆ ಲಾಯಿಲ ನಿವಾಸಿ ಪ್ರತೀಕ್ ದೂರು ಸಲ್ಲಿಸಿದರು.

ಕಾಲಮಿತಿಯಲ್ಲಿ ಪರಿಶೀಲನೆ

ತಾಲೂಕು ಕಚೇರಿಯ 10, ತಾಲೂಕು ಪಂಚಾಯತ್ 7, ಅರಣ್ಯ ಇಲಾಖೆ 2, ಸರ್ವೇ, ಸಮಾಜ ಕಲ್ಯಾಣ, ಪೊಲೀಸ್, ಕೋ-ಆಪರೇಟಿವ್ ಸೊಸೈಟಿ ಹಾಗೂ ಶಿಕ್ಷಣ ಇಲಾಖೆಗಳ ಮೇಲೆ ತಲಾ ಒಂದು ದೂರುಗಳು ಬಂದಿದ್ದು, ಜಮೀನು ಖಾತೆ, ಪ್ಲಾಂಟಿಗ್ ಕುರಿತು ಹೆಚ್ಚಿನ ಅಹವಾಲು ಬಂದಿವೆ. ಎಲ್ಲವನ್ನು ಕಾಲಮಿತಿಯಲ್ಲಿ ಪರಿಶೀಲನೆ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

7 ತಿಂಗಳಾದರೂ ಸಿಗದ ಮಾಹಿತಿ

ಉಜಿರೆ ಪಿಡಿಒ ಕಚೇರಿಯಲ್ಲಿ ಎಲ್ಲಾ ದಿನಗಳಲ್ಲಿ ಲಭ್ಯವಿರುವುದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಅವರ ಚಲನವಲನ ಪುಸ್ತಕದ ಮಾಹಿತಿ ಕೇಳಿದರೆ 7 ತಿಂಗಳಾದರೂ ಇದುವರೆಗೂ ನೀಡಿಲ್ಲ. ಜಮಾಬಂದಿ ವರದಿ ಕೇಳಿದರೂ ನೀಡುತ್ತಿಲ್ಲ. ಕಟ್ಟಡ ಪರವಾನಗಿ ಇಲ್ಲದೆ ವ್ಯಾಪಾರ ನಡೆಸಲಾಗುತ್ತಿದೆ ಎಂದು ಬಾಲಸುಬ್ರಹ್ಮಣ್ಯ ಭಟ್ ಜೆ.ಬೋಳಂಬ ದೂರಿದರು. ಒಂದು ವಾರದೊಳಗೆ ಮಾಹಿತಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳೂ ಸೂಚಿಸಿದರು.

ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಇರುವುದು ಅವರನ್ನು ಪದೇಪದೆ ಸತಾಯಿಸುವ ಕಾರ್ಯ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಇಲಾಖೆ ವಿರುದ್ಧ ಅನೇಕ ದೂರುಗಳು ಬರುತ್ತಿವೆ. ಪಿಂಚಣಿ, ರಜೆ, ವೇತನ ಪಡೆಯಲು ಲಂಚ ನೀಡುವ ಸ್ಥಿತಿ ಇದ್ದು, ದೂರು ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ಗುತ್ತಿಗೆದಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ವಿರುದ್ಧ ದೂರು ಬಂದರೂ ಕ್ರಮ ವಹಿಸಲಾಗುತ್ತದೆ. ಕುಮಾರಚಂದ್ರ, ಪ್ರಭಾರ ಲೋಕಾಯುಕ್ತ ಅಧೀಕ್ಷಕ