ಜಿಲ್ಲೆ

ಲಾಕ್​ಡೌನ್​ ವೇಳೆ ಲಂಚ ಪಡೆದ ಇಬ್ಬರು ಸಾರಿಗೆ ಅಧಿಕಾರಿಗಳ ಅಮಾನತು: 12,350 ರೂ. ನಗದು ವಶ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಅತ್ತಿಬೆಲೆ ಚೆಕ್​ಪೋಸ್ಟ್​ನಲ್ಲಿ ಗುರುವಾರ ರಾತ್ರಿ ಹಣ್ಣು ಮತ್ತು ತರಕಾರಿ ಸಾಗಣೆ ಮಾಡುತ್ತಿದ್ದ ವಾಹನ ಚಾಲಕರಿಂದ ಲಂಚ ಪಡೆದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಇಬ್ಬರು ಬ್ರೇಕ್ ಇನ್ಸ್​ಪೆಕ್ಟರ್​ಗಳನ್ನು ಜಿಲ್ಲಾಧಿಕಾರಿ ಜಿ. ಎನ್.ಶಿವಮೂರ್ತಿ ಅವರು ಅಮಾನತು ಮಾಡಿದ್ದಾರೆ.

ಟಿ. ಕೆ.ಜಯಣ್ಣ ಹಾಗೂ ಕರಿಯಪ್ಪ ಅಮಾನತುಗೊಂಡ ಸಾರಿಗೆ ಅಧಿಕಾರಿಗಳು. ಇವರೊಂದಿಗೆ ಶಾಮೀಲಾಗಿದ್ದ ಮಾಜಿ ಹೋಮ್ ಗಾರ್ಡ್ ವಿವೇಕ್ ಸೇರಿದಂತೆ ಮೂವರನ್ನು ಲಂಚ ಪಡೆದ ಆರೋಪ ಹಿನ್ನೆಲೆಯಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಸಜಿತ್ ಅವರಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕರಿಯಪ್ಪರಿಂದ 1250 ರೂ., ಜಯಣ್ಣರಿಂದ 1100 ರೂ. ಹಾಗೂ ವಿವೇಕ್​ರಿಂದ 800 ರೂ. ಹಾಗೂ ಚೆಕ್​ಪೋಸ್ಟ್ ಕಚೇರಿಯಲ್ಲಿದ್ದ 12,350 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.