ಬಳ್ಳಾರಿ: ಲಾಕ್‌ಡೌನ್‌ನಿಂದ ಕಂಗಾಲಾದ ರೈತರಿಗೆ ಅನುಕೂಲ ಮಾಡುವುದನ್ನು ಬಿಟ್ಟು ಕೆಲವು ಸಹಕಾರಿ ಸಂಘಗಳು ತಿಳಿವಳಿಕೆ ನೋಟಿಸ್ ಕೊಡುವ ನೆಪದಲ್ಲಿ ಅಲ್ಪಾವಧಿ ಸಾಲ ಮರುಪಾವತಿಗೆ ಒತ್ತಡ ಹೇರತೊಡಗಿವೆ.
ಹಡಗಲಿಯ ಕೃಷಿ ಪತ್ತಿನ ಸಹಕಾರ ಸಂಘ 2018-19ನೇ ಸಾಲಿನಲ್ಲಿ ಪಡೆದ ಅಲ್ಪಾವಧಿ ಬೆಳೆ ಸಾಲವನ್ನು ವಾಯಿದೆ ದಿನಾಂಕದೊಳಗೆ ಮರುಪಾವತಿಸಿ ಎಂದು ಮೇ 13ರಂದು ಸಾಲ ಪಡೆದ ತಾಲೂಕಿನ 60ಕ್ಕೂ ಹೆಚ್ಚು ರೈತರಿಗೆ ತಿಳಿವಳಿಕೆ ನೋಟಿಸ್ ಕಳುಹಿಸಿದೆ.ವಾಯಿದೆ ದಿನಾಂಕದೊಳಗೆ ಮರುಪಾವತಿಸಿದರೆ ಮಾತ್ರ ಶೇ. 0 ರಿಯಾಯಿತಿ ಬಡ್ಡಿ ದರದ ಪ್ರಯೋಜನ ಲಭ್ಯ. ಇಲ್ಲದಿದ್ದರೆ ಸಾಲ ಪಡೆದ ದಿನದಿಂದಲೇ ಸಾಮಾನ್ಯ ಬಡ್ಡಿ ದರ ಶೇ.10 ಹಾಗೂ ಸುಸ್ತಿ ಬಡ್ಡಿ ಶೇ. 3 ಒಟ್ಟು ಶೇ. 13ರ ಪ್ರಕಾರ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪತಿ-ಪತ್ನಿ ಇಬ್ಬರೂ ನೀರುಪಾಲು: ಮೂರು ವರ್ಷದ ಮಗು ಅನಾಥ
ಈ ಸಂಘದಲ್ಲಿ ಸಾಲ ಪಡೆದ ಬಹುತೇಕ ರೈತರ ಅವಧಿ ಮೇ 26ಕ್ಕೆ ಮುಗಿಯಲಿದ್ದು, ಅಷ್ಟರೊಳಗೆ ಸಾಲ ಮರುಪಾವತಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಹಲವು ಬ್ಯಾಂಕ್‌ಗಳು ಇದೇ ಮಾರ್ಗ ಅನುಸರಿಸಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹಕಾರ ಸಂಘದ ಅಧಿಕಾರಿಗಳು, ಸಾಲ ಮರುಪಾವತಿಸುವ ಅವಧಿ ಮುಗಿಯಲು ಬಂದಿದ್ದನ್ನು ತಿಳಿಸಲು ತಿಳಿವಳಿಕೆ ನೋಟಿಸ್ ಕೊಡಲಾಗಿದೆ. ಸಾಲ ಮರುಪಾವತಿ ಅವಧಿ ವಿಸ್ತರಣೆ ತಮ್ಮ ಕೈಯಲಿಲ್ಲ ಎಂದು ತಿಳಿಸಿದ್ದಾರೆ.