ಬೆಂಗಳೂರು: ಆರ್ಥಿಕ ಸಂಕಷ್ಟ ಮತ್ತು ಕೌಟುಂಬಿಕ ಕಲಹದಿಂದ ಸ್ನೇಹಿತೆ ಮನೆಯಲ್ಲಿ ಲೈವ್‌ಬ್ಯಾಂಡ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ರಸ್ತೆ ಅಡಕಮಾರನಹಳ್ಳಿ ನಿವಾಸಿ ನಾಗೇಶ್ (28) ಮೃತ ವ್ಯಕ್ತಿ. ಸರ್. ಎಂ.ವಿ. ವಿಶ್ವೇಶ್ವರಯ್ಯ ಲೇಔಟ್ ಸಮೀಪದ ಮುದ್ದನಪಾಳ್ಯದಲ್ಲಿ ನೆಲೆಸಿರುವ ಹೈದರಾಬಾದ್ ಮೂಲದ ಸ್ನೇಹಿತೆ ಮನೆಯಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲಿಸದೆ ಬಿಲ್ ಪಾವತಿಸುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಎಂ.ಜಿ. ರಸ್ತೆಯಲ್ಲಿ ಲೈವ್‌ಬ್ಯಾಂಡ್ ನಡೆಸುತ್ತಿದ್ದ ನಾಗೇಶ್, ಅಡಕಮಾರನಹಳ್ಳಿಯಲ್ಲಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳ ಜತೆಗೆ ನೆಲೆಸಿದ್ದ. ಇದಲ್ಲದೆ, ಮುದ್ದನಪಾಳ್ಯದಲ್ಲಿ ಹೈದರಾಬಾದ್ ಸ್ನೇಹಿತೆ ಜೊತೆಗೆ ನೆಲೆಸಿದ್ದು, ಈಕೆಗೂ 4 ವರ್ಷದ ಪುತ್ರನಿದ್ದಾನೆ.
ಈ ವಿಚಾರ ಪತ್ನಿಗೆ ಗೊತ್ತಾಗಿ ಕುಟುಂಬದಲ್ಲಿ ಆಗಾಗ್ಗೆ ಕಲಹ ನಡೆಯುತ್ತಿದ್ದವು. ಇತ್ತೀಚೆಗೆ ಲೈವ್‌ಬ್ಯಾಂಡ್ ಸಹ ಬಂದ್ ಆಗಿತ್ತು. ಆರ್ಥಿಕ ಸಂಕಷ್ಟ ಮತ್ತು ಕೌಟುಂಬಿಕ ಕಲಹದಿಂದ ನಾಗೇಶ್, ನೊಂದಿದ್ದ. ಮಂಗಳವಾರ ಸ್ನೇಹಿತೆ ಮನೆಗೆ ಬಂದಿದ್ದ ನಾಗೇಶ್, ಊಟ ಮಾಡಿ ಮಲಗಿದ್ದ. ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ನೇಹಿತೆ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಅನ್ನಪೂಣೇಶ್ವರಿರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.