ಜಿಲ್ಲೆ

ಮನುಷ್ಯನ ಭಾವನೆಯೇ ಸಾಹಿತ್ಯ: ಪಿ.ಆರ್.ಲಕ್ಷ್ಮಣ ರಾವ್ ಅಭಿಪ್ರಾಯ

Avinash R

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸಾಹಿತಿ ತನ್ನ ಮನದ ಭಾವನೆ ಹೇಳಲು ಮುಕ್ತ ವಾತಾವರಣ ಅಗತ್ಯ. ಆದರೆ ಪ್ರಸ್ತುತ ದಿನಗಳಲ್ಲಿ ಅಂಥ ವಾತಾವರಣ ಕುಂಠಿತವಾಗಿ ಸಾಹಿತಿಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಕಾರಣವಾಗಿದ್ದು ಮನಸ್ಸಿನ ಭಾವನೆಗಳನ್ನು ಗುಪ್ತವಾಗಿ ಮಾತನಾಡುವ ಕಾಲ ಬಂದಿದೆ. ಪ್ರತಿಯೊಬ್ಬರನ್ನು ಒಳಗೊಳ್ಳುವ ಭಾವನೆಯೇ ಸಾಹಿತ್ಯ ಎಂದು ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಹೇಳಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ ಪರಿಷತ್ತು, ಮಂಗಳೂರು ವಿ.ವಿ. ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸ್ಪೀಕರ್ ಯು.ಟಿ.ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ವಿಶ್ವದ ಸಂಸ್ಕೃತಿಯ ಸಾರ ಭಾರತದಲ್ಲಿ, ಭಾರತದ ಸಂಸ್ಕೃತಿಯ ಸಾರ ಕರ್ನಾಟದಲ್ಲಿ, ಕರ್ನಾಟಕದ ಸಂಸ್ಕೃತಿಯ ಸಾರ ದ.ಕ. ಜಿಲ್ಲೆಯಲ್ಲಿ ಹಾಗೂ ಜಿಲ್ಲೆಯ ಸಂಸ್ಕೃತಿಯ ಸಾರ ಕೊಣಾಜೆ ಸಾಹಿತ್ಯ ಸಮ್ಮೇಳನದಲ್ಲಿ ಸಿಗುತ್ತಿದೆ. ಹಿರಿಯರ ಕೊಡುಗೆಯಿಂದಾಗಿ ನಮ್ಮ ಜಿಲ್ಲೆಯ ಸಂಸ್ಕೃತಿ ಗಟ್ಟಿಯಾಗಿದೆ. ಪ್ರತಿ ಗ್ರಾಮದಲ್ಲಿ ಪಂಚಾಯಿತಿ ಮೂಲಕ ಅನುದಾನ ಮೀಸಲಿಟ್ಟು ಸ್ಥಳೀಯ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ ಹಾಗೂ ಪತ್ರಕರ್ತ ದಿ.ಗುರುವಪ್ಪ ಟಿ.ಎನ್.ಬಾಳೆಪುಣಿ ಪುಸ್ತಕ ಮಳಿಗೆಗಳನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಿದರು. 26ನೇ ಸಾಹಿತ್ಯ ಸಮೇಳನಾಧ್ಯಕ್ಷೆ ಭುವನೇಶ್ವರಿ ಹೆಗಡೆ ಮಾತನಾಡಿದರು. ಸಮ್ಮೇಳನ ಸರ್ವಾಧ್ಯಕ್ಷ ಸಾಹಿತಿ ಡಾ.ಪ್ರಭಾಕರ ಶಿಶಿಲ ಅಧ್ಯಕ್ಷತೆ ವಹಿಸಿದ್ದರು.

ಕುಲಸಚಿವ ರಾಜು ಮೊಗವೀರ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ಡಿ.ಕುಂದರ್, ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತಹಸೀಲ್ದಾರ್ ಪುಟ್ಟರಾಜು, ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್, ಜಯಪ್ರಕಾಶ್, ಮಹಾದೇವ್ ಉಪಸ್ಥಿತರಿದ್ದರು.

ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಡಾ.ಎಂ.ಪಿ.ಶ್ರೀನಾಥ್ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮೀ ರೈ ಕಲ್ಲಿಮಾರ್ ಸರ್ವಾಧ್ಯಕ್ಷರ ಪರಿಚಯ ನೀಡಿದರು. ವೇಣುಗೋಪಾಲ್ ಮತ್ತು ವಿಜಯಲಕ್ಷ್ಮೀ ಕಟೀಲ್ ನಿರೂಪಿಸಿದರು.

ಖರೀದಿ ನಿರುತ್ಸಾಹ

ಸಮ್ಮೇಳನದಲ್ಲಿ ಆರು ಪುಸ್ತಕ ಮಳಿಗೆಗಳಿದ್ದರೆ, ಮಂಗಳೂರು ವಿವಿ ಪ್ರಸಾರಾಂಗದ ಮಳಿಗೆ ಪ್ರತ್ಯೇಕವಾಗಿತ್ತು. 42 ಇತರರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದ್ದು, 11 ಮಳಿಗೆಗಳು ಖಾಲಿಯಾಗಿದ್ದವು. ಪುಸ್ತಕ ಮಳಿಗೆ ಇದ್ದಲ್ಲೇ ಹಳೇ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಳಿಗೆ ಪ್ರವೇಶಿಸಿದರೂ ಹಳೇ ವಸ್ತುಗಳನ್ನಷ್ಟೇ ವೀಕ್ಷಿಸಿ ಹೋಗುತ್ತಿದ್ದರು. ಪುಸ್ತಕ ಖರೀದಿ ಮಾತ್ರವಲ್ಲದೆ ವೀಕ್ಷಣೆ ಆಸಕ್ತಿಯೂ ಕಂಡುಬರಲಿಲ್ಲ.

ಪ್ಲೇಟ್, ಬಟ್ಟಲು ತೊಳೆದ ಹಸಿರುದಳ!

ಕಾರ್ಯಕ್ರಮದಲ್ಲಿ ಉಪಾಹಾರ, ಊಟೋಪಚಾರದ ವ್ಯವಸ್ಥೆಯಲ್ಲಿ ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಮೂರು ಸಾವಿರ ಹಾಳೆಯ ಬಟ್ಟಲು ಮತ್ತು ಕಾಗದದ ಲೋಟ ಬಳಸಲು ಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಹಸಿರುದಳದ ನಾಗರಾಜ್ ಬುಧವಾರ ನಡೆದ ಸಭೆಯಲ್ಲಿ ಹಾಳೆಯ ಬಟ್ಟಲು ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಫೈಬರ್ ಬಟ್ಟಲು, ಲೋಟ ಬಳಸಲಾಗಿದೆ. ಸಾವಿರ ಸ್ಟೀಲ್ ಲೋಟ ಹಸಿರುದಳದಿಂದ ನೀಡಲಾಗಿದೆ. ಬಟ್ಟಲು, ಲೋಟಗಳನ್ನು ತೊಳೆಯಲು ಇಬ್ಬರು ಕಾರ್ಮಿಕರನ್ನು ನೇಮಿಸಲಾಗಿದ್ದರೆ ಹಸಿರುದಳದ ನಾಗರಾಜ್ ಸಹಿತ ಸದಸ್ಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ಇದರಿಂದ ಸಂಘಟಕರಿಗೆ 15ರಿಂದ 20 ಸಾವಿರ ರೂ. ಖರ್ಚು ಉಳಿತಾಯವಾಗಿದೆ ಎಂದು ನಾಗರಾಜ್ ತಿಳಿಸಿದ್ದಾರೆ. ಆದರೆ ಸಭಾಂಗಣದೊಳಗೆ ಬಾಟಲ್ ನೀರು ರಾರಾಜಿಸುತ್ತಿತ್ತು.

ಖಾದರ್ ಹಿಂದೆ ಹೋದ ಅಧಿಕಾರಿಗಳು!

ಸ್ಪೀಕರ್ ಯು.ಟಿ.ಖಾದರ್ ಮಾತಿನ ಬಳಿಕ ಅವರ ಸಹಿತ ಉದ್ಘಾಟಕರು ಹಾಗೂ ಕುಲಪತಿಯನ್ನು ಸನ್ಮಾನಿಸಲಾಯಿತು. ಬಳಿಕ ಖಾದರ್ ಕಾರ್ಯಕ್ರಮದಿಂದ ನಿರ್ಗಮಿಸಿದಾಗ ಅವರ ಅಭಿಮಾನಿಗಳು, ರಾಜಕೀಯ ಮುಖಂಡರ ಸಹಿತ ತಹಸೀಲ್ದಾರ್, ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭಾಂಗಣದಿಂದ ನಿರ್ಗಮಿಸಿದರು. ಅವರೆಲ್ಲ ಸಭಾಂಗಣ ತೊರೆದ ಬಳಿಕ ಕುಲಪತಿ ಮಾತು ಆರಂಭಿಸಿದರು. ಬಳಿಕ ಬಹುತೇಕ ಮಕ್ಕಳೂ ಭಾಷಣಕ್ಕೆ ಕಾಯದೆ ಸಭಾಂಗಣದಿಂದ ನಿರ್ಗಮಿಸಿದರು.

ಮಕ್ಕಳು ನೆಲದಲ್ಲಿ!

ಮಂಗಳಾ ಸಭಾಂಗಣದಲ್ಲಿ 700 ಮಂದಿಗೆ ಮಾತ್ರ ಆಸನದ ವ್ಯವಸ್ಥೆ ಇದೆ. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಆಸನದ ವ್ಯವಸ್ಥೆ ಸಾಕಾಗದೆ ಮಕ್ಕಳು ನೆಲದಲ್ಲಿ ಕುಳಿತುಕೊಂಡು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.