ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ವಿನ್ಸೆಂಟ್ ಕ್ಯಾಸ್ತಲಿನೋ ಬಂಟಕಲ್ಲು, ಹಮೀದ್ ಪಡುಬಿದ್ರಿ, ಪಿ.ಆರ್.ಶ್ರೀನಿವಾಸ ಉಡುಪ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ರೈತರ ಸಮಸ್ಯೆಗಳಿಗೆ ಸಾಹಿತ್ಯಿಕ ಬೆಂಬಲ

ಇಂದಿರಾ ಎನ್ ಕೆ

ಪಡುಬಿದ್ರಿ: ಕೃಷಿ, ಶಿಕ್ಷಣ, ಪರಿಸರ ಹಾಗೂ ಮೀನುಗಾರಿಕೆ ಸಂಬಂಧಿಸಿ ನಿರ್ಣಯ ಕೈಗೊಳ್ಳುವ ಮೂಲಕ ಪಾಂಗಾಳ ಬಾಬು ಕೊರಗ ಸರ್ವಾಧ್ಯಕ್ಷತೆಯಲ್ಲಿ ಪಲಿಮಾರಿನಲ್ಲಿ ಶನಿವಾರ ನಡೆದ ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪಗೊಂಡಿತು.

ಕಾಪು ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿಯೂ ನಾಗರಿಕರಿಗೆ ತೊಂದರೆಯಾಗುವ ಪರಿಸರ ಸಂಬಂಧಿ ವಿನಾಶಗಳಿಗೆ ಸಾಹಿತ್ಯ ಪರಿಷತ್ತು ಧ್ವನಿಯಾಗುವುದು. ಗ್ರಾಮಾಂತರ ರೈತರ ಯಾವುದೇ ಸಮಸ್ಯೆಗಳಿಗೆ ಸಾಹಿತ್ಯಕ ಬೆಂಬಲ ನೀಡುವುದರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಸಾರ್ವಜನಿಕರ ಗಮನ ಸೆಳೆಯುವುದು. ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರನ್ನು ಭರ್ತಿ ಮಾಡಲ ಸರ್ಕಾರ ಅನುಮತಿ ನೀಡಿದಂತೆ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿಯೂ ಖಾಲಿ ಹುದ್ದೆಗಳನ್ನು ತುಂಬುವಂತೆ ಸರ್ಕಾರ ಆದೇಶ ಮಾಡುವುದು. ಕನಿಷ್ಠ ಪಕ್ಷ 100ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಹೊಸ ಶಿಕ್ಷಕರನ್ನು ನೇಮಿಸಲು ಅವಕಾಶ ಕಲ್ಪಿಸುವುದು. ನಿರ್ಮಾಣ ಹಂತದಲ್ಲಿರುವ ಹೆಜಮಾಡಿ ಸರ್ವಋತು ಬಂದರು ಕಾಮಾಗರಿ ಶೀಘ್ರ ಪೂರ್ಣಗೊಳಿಸುವಂತೆ ಹಾಗೂ ತಾಲೂಕು ಸಮ್ಮೇಳನಗಳಿಗೆ ಈ ಹಿಂದೆ ಕೊಡುತ್ತಿದ್ದ ಅನುದಾನವನ್ನು ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯಿಸಲಾಯಿತು. ವಿವಿಧ ಗೋಷ್ಠಿ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ವಾಸುದೇವ ಬೆಳ್ಳೆ ಸಮಾರೋಪ ಭಾಷಣ ಮಾಡಿದರು. ತಹಸೀಲ್ದಾರ್ ಪ್ರತಿಭಾ ಆರ್., ಬಿ.ಪುಂಡಲೀಕ ಮರಾಠೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ವೈ.ಸುಧೀರ್‌ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಿರೀಶ್ ಪಲಿಮಾರು, ಸೌಮ್ಯಲತಾ ಶೆಟ್ಟಿ, ರಾಯೇಶ್ವರ್ ಪೈ, ಗಾಯತ್ರಿ ಡಿ. ಪ್ರಭು, ಸುಜಾತ, ಗ್ರೆಟ್ಟಾ ಮೊರಾಸ್, ಕಿಶೋರ್ ಆಳ್ವ, ಎಲ್ಲಮ್ಮ, ಹರೀಶ್ ಕುಮಾರ್ ಹೆಜಮಾಡಿ ಉಪಸ್ಥಿತರಿದ್ದರು. ಅನಂತ ಮೂಡಿತ್ತಾಯ ಸ್ವಾಗತಿಸಿದರು. ಬಂಟಕಲ್ಲು ರಾಮಕೃಷ್ಣ ಶರ್ಮ ಹಾಗೂ ಕೃಷ್ಣಕುಮಾರ್ ಮಟ್ಟು ನಿರ್ಣಯ ಮಂಡಿಸಿದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಪಿಲಾರು ಸುಧಾಕರ ಶೆಣೈ ವಂದಿಸಿದರು.

ಸಾಧಕರಿಗೆ ಗೌರವಾರ್ಪಣೆ

ಸಾಧಕರಾದ ವಿನ್ಸೆಂಟ್ ಕ್ಯಾಸ್ತಲಿನೋ ಬಂಟಕಲ್ಲು, ಹಮೀದ್ ಪಡುಬಿದ್ರಿ, ಪಿ.ಆರ್.ಶ್ರೀನಿವಾಸ ಉಡುಪ ಪಲಿಮಾರು, ಹೊಗೆ ಫ್ರೆಂಡ್ಸ್ ಹೊಗೆ ಪಲಿಮಾರು ಸಂಘಟನೆಯನ್ನು ಗೌರವಿಸಲಾಯಿತು.