ಬೆಂಗಳೂರು:ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ಶನಿವಾರ ಒಂದೇ ದಿನದಂದು 408 ಕೋಟಿ ರೂ.ಮದ್ಯ ಮಾರಾಟವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಗಣನೀಯವಾಗಿ ಆದಾಯ ಹರಿದು ಬಂದಿದೆ.
ರಾಜ್ಯದಲ್ಲಿ 3,988 ವೈನ್ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್&7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟದಿಂದಾಗಿ ಸರ್ಕಾರಕ್ಕೆ 65-70 ಕೋಟಿ ರೂ.ಇಲಾಖೆ ಮೂಲಕ ಆದಾಯ ಬರುತ್ತಿತ್ತು. ಆದರೆ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಸರ್ಕಾರ, ಶುಕ್ರವಾರ (ಡಿ.27) ರಜೆ ಘೋಷಿಸಿತ್ತು. 4ನೇ ಶನಿವಾರವೂ ರಜೆ ಇರುವುದರಿಂದ ಕೆಎಸ್ಬಿಸಿಎಲ್ ಡಿಪೋಗಳಿಂದ ಮದ್ಯ ಎತ್ತುವಳಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಸತತ ರಜೆ ದಿನಗಳು ಬಂದಿರುವ ಹಿನ್ನೆಲೆಯಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡುವಂತೆ ರಾಜ್ಯ ಮದ್ಯ ಮಾರಾಟಗಾರರ ಸಂಘದ ವಿನಂತಿ ಮೇರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ(ಕೆಎಸ್ಬಿಸಿಎಲ್) ಸಾಲ ಸೌಲಭ್ಯ( ಕ್ರೆಡಿಟ್ ಫೆಸಿಲಿಟಿ) ಆಧಾರದ ಮೇರೆಗೆ ಡಿಪೋಗಳಲ್ಲಿ ಮದ್ಯ ಎತ್ತುವಳಿಗೆ ಅನುಮತಿ ನೀಡಿದ್ದು, 327 ಕೋಟಿ ರೂ.ಮೌಲ್ಯದ 6 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್) ಹಾಗೂ 80 ಕೋಟಿ ರೂ. ಮೌಲ್ಯದ 4 ಲಕ್ಷ ಬಾಕ್ಸ್ ಬಿಯರ್ ಎತ್ತುವಳಿಯಾಗಿದೆ. ಈ ಮೂಲಕ ಅಬಕಾರಿ ಇತಿಹಾಸದಲ್ಲೇ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾದಂತಾಗಿದೆ.
ಮೊದಲ ಬಾರಿ ಕ್ರೆಡಿಟ್ ಫೆಸಿಲಿಟಿ
ಮದ್ಯದಂಗಡಿ ಮಾಲೀಕರ ಮನವಿ ಮೇರೆಗೆ ಹಾಗೂ ರಜೆ ಹಿನ್ನೆಲೆಯಲ್ಲಿ ಬ್ಯಾಂಕ್ಗಳು ತೆರೆಯದ ಕಾರಣ ದೇಶದಲ್ಲೇ ಪ್ರಥಮ ಬಾರಿಗೆ "ಸಾಲ ಸೌಲಭ್ಯ' ಆಧಾರದಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡಿದ್ದವು.ದಾಖಲೆ ಮಟ್ಟದಲ್ಲಿ ಮದ್ಯ ಸೇಲಾಗಿರುವ ಪರಿಣಾಮ ಇಲಾಖೆಗೆ ಹೆಚ್ಚಿನ ಆದಾಯ ಬಂದಿದೆ ಎಂದು ಇಲಾಖೆ ಜಂಟಿ ಆಯುಕ್ತ ಟಿ.ನಾಗರಾಜಪ್ಪ ವಿಜಯವಾಣಿಗೆ ತಿಳಿಸಿದ್ದಾರೆ.
ಸೋಮವಾರದಿಂದ ಮದ್ಯ ಸಂಗ್ರಹ ಜೋರು
ಹೊಸ ವರ್ಷಕ್ಕೆ ಮದ್ಯದ ಕಿಕ್ ಜೋರಾಗುವ ಸಾಧ್ಯತೆ ಇದೆ. ನಗರ ಹಾಗೂ ಗ್ರಾಮೀಣ ಭಾಗದ ಮೂಲೆಯಲ್ಲಿ ಮೂಲೆಯಲ್ಲಿ ಜನರು ಮದ್ಯದ ನಶೆ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮದ್ಯದಂಗಡಿಗಳನ್ನು ತರಹೇವಾರಿ ವಿನ್ಯಾಸ ಮಾಡಿಕೊಳ್ಳಲಾಗುತ್ತಿದ್ದು,ಸಾಕಷ್ಟು ಪ್ರಮಾಣದಲ್ಲಿ ಮದ್ಯ, ಬಿಯರ್ ದಾಸ್ತಾನು ಮಾಡಿಕೊಳ್ಳಲು ಮಾಲೀಕರು ಮುಂದಾಗಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಇನ್ನಷ್ಟು ಆದಾಯ ಹರಿದು ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.
ಶನಿವಾರ ಮದ್ಯ ಸೇಲ್ ವಿವರ
ಮದ್ಯವಿಧ ಬಾಕ್ಸ್ ಮೌಲ್ಯ( ಕೋಟಿ ರೂ.ಗಳಲ್ಲಿ)
ಐಎಂಎಲ್ 6,22,062 327.50
ಬಿಯರ್ 4,04,998 80.58
ಮಾಲೀಕರು ಕ್ರೆಡಿಟ್ ಫೆಸಿಲಿಟಿ ಆಧಾರದಲ್ಲಿ 150 ಕೋಟಿ ರೂ.ಮೌಲ್ಯದ ಮದ್ಯ ಖರೀದಿಸಿದ್ದಾರೆ. ಒಟ್ಟು 8,341 ಇನ್ವಾಯ್ಸ್ಗಳಾಗಿವೆ. ಇದಕ್ಕೆ ಸಹಕರಿಸಿದ ಅಬಕಾರಿ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇವೆ.
| ಬಿ.ಗೋವಿಂದರಾಜ ಹೆಗ್ಡೆ. ಪ್ರಧಾನ ಕಾರ್ಯದರ್ಶಿ ರಾಜ್ಯ ಮದ್ಯ ಮಾರಾಟಗಾರರ ಸಂಘ.