ಜಿಲ್ಲೆ

ಬಿತ್ತುಲ್ ಪ್ರದೇಶದಲ್ಲಿ ದ್ರವ ತ್ಯಾಜ್ಯ ಘಟಕ ಸಮಸ್ಯೆ

Avinash R

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಕಳೆದ ಕೆಲವು ವರ್ಷಗಳಿಂದ ಪರಿಹಾರವಾಗದೆ ಇರುವ ಕಿನ್ನಿಗೋಳಿ ದ್ರವ ತ್ಯಾಜ್ಯ ಘಟಕಕ್ಕೆ ಶಾಸಕ ಉಮಾನಾಥ ಕೋಟ್ಯಾನ್​ ಭೇಟಿ ನೀಡಿದರು.

ಘಟಕ ಸಮೀಪದಲ್ಲಿನ ಹಲವು ಮನೆಗಳಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು, ಈ ಬಗ್ಗೆ ಅನೇಕ ಬಾರಿ ಸ್ಥಳಿಯಾಡಳಿತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ನಮಗೆ ಬದುಕಲು ಕಷ್ಟವಾಗುತ್ತಿದೆ. ವಸತಿ ಸಮುಚ್ಚಯದ ಶೌಚಗೃಹದ ನೀರು ನೇರವಾಗಿ ಬಿಡುತ್ತಾರೆ ಎಂದು ಸ್ಥಳಿಯರು ಆರೋಪಿಸಿದರು.

ಎರಡೂ ಕಡೆಯ ಜನರ ಸಮಸ್ಯೆ ಆಲಿಸಿದ ಶಾಸಕ ಉಮಾನಾಥ ಕೊಟ್ಯಾನ್​, ಅವರವರ ತ್ಯಾಜ್ಯವನ್ನು ಅವರೇ ವಿಲೇವಾರಿ ಮಾಡಬೇಕಾಗಿದೆ. ಮತ್ತೆ ಅಂಗಡಿ ಮುಂಗಟ್ಟುಗಳ ತ್ಯಾಜ್ಯ ನೀರು ಬಿಟ್ಟರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

10 ವರ್ಷಗಳ ಹಿಂದೆ ಕಿನ್ನಿಗೋಳಿಯಲ್ಲಿ ಗ್ರಾಮ ಪಂಚಾಯಿತಿ ಇರುವಾಗಲೇ ಈ ಘಟಕ ಪ್ರಾರಂಭವಾಗಿದ್ದು, ಉತ್ತಮ ಯೋಜನೆಯಾಗಿತ್ತು. ದ್ರವ ತ್ಯಾಜ್ಯಕ್ಕೆ ಶಾಶ್ವತ ಪರಿಹಾರಕ್ಕಾಗಿ ಕಿನ್ನಿಗೋಳಿಯ ಹೋಟೆಲ್​, ಬಾರ್​ ಮಾಲೀಕರು ಇದಕ್ಕೆ ಇಂತಿಷ್ಟು ಮೊತ್ತ ನೀಡುತ್ತಿದ್ದರು. ಆದರೆ ಆಗಿನ ಗ್ರಾಪಂ ಆಡಳಿತದ ರ್ನಿಲಕ್ಷ ಮತ್ತು ಸರಿಯಾದ ಭವಿಷ್ಯದ ಯೋಜನೆ ಇಲ್ಲದ ಕಾರಣ ಇದೀಗ ಸಮಸ್ಯೆ ಉದ್ಭವವಾಗಿದೆ.

ಉದ್ಯಮಿಗಳಿಂದ ಹಣ ವಸೂಲಿ

ಈ ದ್ರವ ತ್ಯಾಜ್ಯ ಘಟಕಕ್ಕೆ ಆಗಿನ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸ್ಥಳಿಯ ಉದ್ಯಮಿಗಳಿಂದ ಹಣ ಪಡೆದಿದೆ. ಆದರೆ ಇದಕ್ಕೆ ಸರಿಯಾದ ರಶೀದಿ ನೀಡಿಲ್ಲ ಹಾಗೂ ಸರಿಯಾದ ಘಟಕವೂ ನಿರ್ಮಿಸಿಲ್ಲ. ಇದೀಗ ಸ್ಥಳಿಯರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.