ಸದನದಲ್ಲಿ ಮಾತನಾಡಿದ ಶಾಸಕ ಮಾನಪ್ಪ ವಜ್ಜಲ.  
ಜಿಲ್ಲೆ

200 ಬೆಡ್ ಆಸ್ಪತ್ರೆಗಾಗಿ ಕೈ ಮುಗಿದ ಶಾಸಕ

ಲಿಂಗಸುಗೂರು: ಕೈ ಮುಗಿದು ಕೇಳಿಕೊಳ್ಳುತ್ತೇನೆ ಪಟ್ಟಣಕ್ಕೆ 200 ಬೆಡ್ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಶಾಸಕ ಮಾನಪ್ಪ ವಜ್ಜಲ ಗುರುವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದರೂ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಕರುಣೆ ತೋರಲಿಲ್ಲ.

ಲಿಂಗಸುಗೂರು 100 ಬೆಡ್ ಆಸ್ಪತ್ರೆಯನ್ನು 200 ಬೆಡ್ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಮಾಡಲಾಗಿತ್ತು. ಇದರಿಂದ ಲಿಂಗಸುಗೂರು ತಾಲೂಕಿನ ಜನತೆ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದರು. ಆದರೆ 200 ಬೆಡ್ ಆಸ್ಪತ್ರೆ ಸಿಂಧನೂರಿಗೆ ವರ್ಗಾಯಿಸಲಾಯಿತು. ಸಿಂಧನೂರಿಗೆ ನೀಡಲು ಅಪಸ್ವರ ಇಲ್ಲ. ಆದರೆ ಲಿಂಗಸುಗೂರಿಗೆ ಕೊಟ್ಟಿರುವುದನ್ನು ಸಿಂಧನೂರಿಗೆ ಕೊಟ್ಟಿರುವುದು ಸರಿಯಾದ ಕ್ರಮವಲ್ಲ ಎಂದು ಶಾಸಕ ಬೇಸರ ವ್ಯಕ್ತಪಡಿಸಿದರು.

ಲಿಂಗಸುಗೂರು ತಾಲೂಕು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿನ ಜನರ ಬೇಡಿಕೆಯಾಗಿರುವ ಆಸ್ಪತ್ರೆ ಯಾವುದೇ ಕಾರಣ ನೀಡಿ ಕೈ ಬಿಡುವುದು ಸರಿಯಲ್ಲ. ಕೈ ಮುಗಿದು ಕೇಳಿಕೊಳ್ಳುತ್ತೇನೆ ಲಿಂಗಸುಗೂರಿಗೆ 200 ಬೆಡ್ ಆಸ್ಪತ್ರೆ ನೀಡಬೇಕೆಂದು ಪಟ್ಟು ಹಿಡಿದರು. ಶಾಸಕ ಮಾನಪ್ಪ ವಜ್ಜಲರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಒಮ್ಮೆ ಕೊಟ್ಟಿದ್ದನ್ನು ವಾಪಸ್ಸು ಪಡೆದಾಗ ಲಿಂಗಸುಗೂರಿನ ಜನತೆಗೆ ಖಂಡಿತ ನೋವಾಗುತ್ತದೆ. ಕೊಡದೇ ಹೋಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಲಿಂಗಸುಗೂರಿಗೆ 100 ಬೆಡ್ ಆಸ್ಪತ್ರೆ ಇದೆ. ತಾಯಿ ಮಕ್ಕಳ 100 ಬೆಡ್ ಆಸ್ಪತ್ರೆ ಇದೆ. ಈಗ ಮತ್ತೊಂದು 50 ಬೆಡ್ ಆಸ್ಪತ್ರೆಯನ್ನು ಮಂಜೂರು ಮಾಡಿ ಅನುಮೋದನೆ ಕೊಡಲಾಗಿದೆ. ಒಟ್ಟು 250 ಬೆಡ್ ಆಸ್ಪತ್ರೆಯಾಗುತ್ತದೆ ಎಂದು ಹೇಳಿದರು.

ಸಚಿವರ ಮಾತನ್ನು ಒಪ್ಪದ ಶಾಸಕ ಮಾನಪ್ಪ ವಜ್ಜಲ, ತಾಯಿ ಮಕ್ಕಳ ಆಸ್ಪತ್ರೆಯೇ ಬೇರೆ, ನಾವು ಕೇಳುವ ಆಸ್ಪತ್ರೆಯೇ ಬೇರೆ. ಅದಕ್ಕೂ ಇದಕ್ಕೂ ಹೋಲಿಸುವುದು ಬೇಡ. ಪ್ರತಿನಿತ್ಯ 800 ರಿಂದ 900 ಹೊರ ರೋಗಿಗಳು ಬರುತ್ತಾರೆ. ಮೊದಲು ಮಂಜೂರಾತಿ ನೀಡಿದ್ದ 200 ಬೆಡ್ ಆಸ್ಪತ್ರೆಗೆ ಮಂಜೂರಾತಿ ನೀಡಬೇಕು. 50 ಬೆಡ್ ಆಸ್ಪತ್ರೆ ಬೇಡ ಎಂದು ಪಟ್ಟು ಹಿಡಿದರೂ ಫಲ ಸಿಗಲಿಲ್ಲ.