ಬೆಂಗಳೂರು: ರಾಜಧಾನಿಯಲ್ಲಿ ಸಾವಿರಾರು ಎಕರೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಿರುವ ಬೆನ್ನಲ್ಲೇ ಸರ್ವಜ್ಞನಗರ ಕ್ಷೇತ್ರದ ಕಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಲಿಂಗರಾಜಪುರ ಕರೆಯ ಜಾಗವನ್ನು ಕಾನೂನುಬಾಹಿರವಾಗಿ ಖಾಸಗಿಯವರಿಗೆ ಪರಭಾರೆ ಮಾಡಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಒಟ್ಟು 15 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆಯ ಜಾಗದ ಪೈಕಿ 2 ಎಕರೆ 22 ಗುಂಟೆ ಜಾಗವನ್ನು ಬೇರೆ ಸರ್ವೇ ನಂಬರ್ ನಮೂದಿಸಿ ಖಾಸಗಿಯವರಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಸ್ಥಳೀಯ ಕಂದಾಯ ಅಧಿಕಾರಿ ಸೇರಿ ಪಾಲಿಕೆ ಅಧಿಕಾರಿಗಳು ಶಾಮೀಲಾಗಿ ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ. ಪಹಣಿಯಲ್ಲಿ ಸರ್ಕಾರಿ ಜಾಗವೆಂದು ತೋರಿಸಲಾಗುತ್ತಿದೆ. ಆದರೂ, ತಮ್ಮ ಜಾಗವೆಂದು ತಕರಾರು ತೆಗೆದಿರುವ ಖಾಸಗಿಯವರು ಅನಗತ್ಯವಾಗಿ ಕೋರ್ಟ್‌ನಲ್ಲಿ ಕೇಸ್ ಹಾಕಿಕೊಂಡಿದ್ದಾರೆ. ಇದರ ಬಗ್ಗೆ ಬಿಬಿಎಂಪಿ ಸಹ ಏನು ಕ್ರಮ ಕೈಗೊಳ್ಳದೆ ಸುಮ್ಮನಾಗಿದೆ.
15 ವರ್ಷಗಳಿಂದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ಸ್ಥಳೀಯ ರಾಜಕಾರಣಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದರು. ಸತತ ಹೋರಾಟದ ಲವಾಗಿ ಸರ್ಕಾರಿ ಜಾಗ ಉಳಿದಿದೆ. ಲಿಂಗರಾಜಪುರ ಕರೆಯ ಜಾಗವನ್ನು ಕಬಳಿಸಲಾಗಿದೆ. ಸ್ಥಳೀಯ ಕಂದಾಯ ಅಧಿಕಾರಿಗಳು ಸೇರಿ ಪಾಲಿಕೆ ಇತರೆ ಅಧಿಕಾರಿಗಳು ನಿಯಮಬಾಹಿರವಾಗಿ ಖಾಸಗಿಯವರಿಗೆ ಕೆರೆಯ ಜಾಗವನ್ನು ನೋಂದಣಿ ಮಾಡಿಕೊಟ್ಟಿದ್ದಾರೆ. ಇದರ ಬಗ್ಗೆ ಕೂಡಲೇ ಪಾಲಿಕೆ ಗಮನಹರಿಸಿ ಒತ್ತುವರಿದಾರರಿಂದ ವಶಪಡಿಸಿಕೊಳ್ಳಬೇಕು. ಒತ್ತುವರಿದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಗೋಪಾಲ್ ರೆಡ್ಡಿ ಒತ್ತಾಯಿಸಿದ್ದಾರೆ.
ನಗರದಲ್ಲಿ ನೂರಾರು ಕೆರೆಗಳನ್ನು ಕಬಳಿಸಿರುವ ಭೂಗಳ್ಳರು, ಅಕ್ರಮವಾಗಿ ಸಾವಿರಾರು ಎಕರೆ ಸರ್ಕಾರಿ ಜಾಗವನ್ನೂ ನುಂಗಿದ್ದಾರೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ ಪ್ರದೇಶದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಸರ್ಕಾರಿ ಜಮೀನಿನ ಒಟ್ಟು ಮೌಲ್ಯ 5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆಲದ ಮರದಂತೆ ಬಲಾಢ್ಯವಾಗಿ ಬೆಳೆದಿರುವ ಭೂಮಾಫಿಯಾವನ್ನು ಸದೆಬಡಿಯಲು ಸರ್ಕಾರಕ್ಕೂ ಇಚ್ಛಾಶಕ್ತಿ ಇಲ್ಲದಂತಾಗಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದು ವಿಪರ್ಯಾಸ.