ಚಿಕ್ಕೋಡಿ: ಆತ ಊರಿಗೇ ಬೆಳಕು ನೀಡಲೆಂದು ಹೋಗಿದ್ದ. ಆದರೆ ದುರದೃಷ್ಟವಶಾತ್ ಆತನ ಮನೆಯೇ ಕತ್ತಲಲ್ಲಿ ಮುಳುಗುವಂತಾಗಿದೆ. ಮನೆಯವರ ಪಾಲಿಗೆ ಜೀವನಜ್ಯೋತಿಯಂತಿದ್ದ ಆತನೇ ಇದೀಗ ಇಲ್ಲವಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಉರಬಿನಟ್ಟಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ರಮೇಶ್ ಹೊಳೆಪ್ಪಗೋಳ (32) ಸಾವಿಗೀಡಾದ ದುರ್ದೈವಿ. ಲೈನ್ಮ್ಯಾನ್ ಆಗಿರುವ ರಮೇಶ್ ಟ್ರಾನ್ಸ್ಫಾರ್ಮರ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ, ತೀವ್ರ ವಿದ್ಯುದಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ರಮೇಶ್ ಜತೆ ಮತ್ತೊಬ್ಬ ಲೈನ್ಮ್ಯಾನ್ ಧರಿಗೌಡ ವಡೇರ ಎಂಬವರೂ ಕೆಲಸ ಮಾಡುತ್ತಿದ್ದು, ಅವರಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಂಕಲಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.