ಜಿಲ್ಲೆ

ಲೈಟ್‌ಫಿಶಿಂಗ್ ದೋಣಿಗಳು ವಶ : 5 ಲ.ರೂ.ದಂಡ

ಸೌಮ್ಯ ಆರ್

ಕಾಸರಗೋಡು: ಆಳ ಸಮುದ್ರದಲ್ಲಿ ಪ್ರಖರ ಬೆಳಕು ಹಾಯಿಸಿ ಮೀನುಗಾರಿಕೆ ನಡೆಸುತ್ತಿದ್ದ ಎರಡು ಲೈಟ್‌ಫಿಶಿಂಗ್ ಬೋಟುಗಳನ್ನು ಕೇರಳ ಮೀನುಗಾರಿಕಾ ಇಲಾಖೆ, ಮರೈನ್ ಎನ್ಫೋರ್ಸ್‌ಮೆಂಟ್, ಕರಾವಳಿ ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಕಡಲ ತೀರದಿಂದ 12ನಾಟಿಕಲ್ ಮೈಲು ದೂರದಲ್ಲಿ ತೀವ್ರ ಬೆಳಕು ಹಾಯಿಸಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ. ಕೇರಳ ಮೀನುಗಾರಿಕಾ ನಿಯಂತ್ರಣ ಕಾನೂನು ಉಲ್ಲಂಘನೆಯ ಅಪರಾಧದನ್ವಯ ಬೋಟು ವಶ ಪಡಿಸಿಕೊಂಡು ಬೋಟುಗಳಿಗೆ ಐದು ಲಕ್ಷ ರೂ.ದಂಡ ವಿಧಿಸಲಾಗಿದೆ.

ಆಳ ಸಮುದ್ರದಲ್ಲಿ ಅತಿ ಬೆಳಕು ಹಾಯಿಸಿದಾಗ ಮೀನು ಗುಂಪಾಗಿ ಬೆಳಕಿದ್ದೆಡೆ ಸೇರುತ್ತವೆ. ಅದನ್ನು ಬಲೆಹಾಕಿ ಸಂಗ್ರಹಿಸಲಾಗುತ್ತದೆ. ಈ ರೀತಿಯ ಮೀನುಗಾರಿಕೆಯನ್ನು ಕೇಂದ್ರ, ರಾಜ್ಯ ಸರ್ಕಾರ ಈಗಾಗಲೇ ನಿಷೇಧಿಸಿದೆ. 12ವಾಟ್ಸ್‌ಗಿಂತ ಕೆಳಗಿನ ಬೆಳಕಿನಲ್ಲಿ ಮಾತ್ರ ಮೀನುಗಾರಿಕೆ ನಡೆಸಬೇಕಾಗಿದ್ದರೂ, ಇತರ ರಾಜ್ಯಗಳ ಕೆಲವು ಬೋಟುಗಳು ಸ್ಥಳೀಯರನ್ನು ಬಳಸಿಕೊಂಡು 5 ಸಾವಿರ ವಾಟ್ಸ್‌ನ ಪ್ರಖರ ಬೆಳಕು ಹಾಯಿಸಿ ಮೀನುಗಾರಿಕೆ ನಡೆಸುತ್ತಿದೆ.