ಜಿಲ್ಲೆ

ಇನ್ನೊಬ್ಬರ ಮುಖದಲ್ಲಿ ನಗು ಕಂಡಾಗ ಬದುಕು ಸಾರ್ಥಕ

ಬೈಂದೂರು: ಹುಟ್ಟು, ಬದುಕು ಹಾಗೂ ಸಾವಿನ ನಡುವಿನ ಜೀವನ ಆಟದಲ್ಲಿ ಜತೆಯಾಗಿದ್ದಷ್ಟು ಕಾಲ ಪರಸ್ಪರ ಸಹಕಾರದ ಮೂಲಕ ಪ್ರೀತಿಯ ಬೀಜವನ್ನು ಭಿತ್ತಿ ಪ್ರತಿಯೊಬ್ಬರ ಮೊಗದಲ್ಲೂ ನಗುವನ್ನು ಕಾಣುವುದರಲ್ಲಿ ಬದುಕಿನ ಸಾರ್ಥಕತೆ ಅಡಗಿದೆ. ಸನಾತನ ಸಂಸ್ಕೃತಿಯ ಪರಂಪರೆ, ರೀತಿ ರಿವಾಜುಗಳನ್ನು ನಾವು ಸ್ವತಃ ಅನುಸರಿಸಿ ಎಳವೆಯಲ್ಲೇ ಮಕ್ಕಳಿಗೆ ತಲುಪುವಂತೆ ಮಾಡಬೇಕು ಎಂದು ನಿವೃತ್ತ ಶಿಕ್ಷಕಿ ಗಿರಿಜಾ ಮಯ್ಯ ಹೇಳಿದರು. ಸಾಲಿಗ್ರಾಮ ಕೂಟ ಮಹಾಜಗತ್ತು ಕಿರಿಮಂಜೇಶ್ವರ ಅಂಗಸಂಸ್ಥೆಯ ಮಹಿಳಾ ವೇದಿಕೆ ವತಿಯಿಂದ ನಾಗೂರು ಶ್ರೀ ಗುರುನರಸಿಂಹ ಸಭಾಭವನದಲ್ಲಿ ಸ್ನೇಹಕೂಟದಲ್ಲಿ ಮಾತನಾಡಿದರು. ಕಿರಿಮಂಜೇಶ್ವರ ಅಂಗ ಸಂಸ್ಥೆ ಅಧ್ಯಕ್ಷ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ, ಇಂತಹ ಕಾರ್ಯಕ್ಕಮಗಳಿಂದ ಮಹಿಳೆಯರಿಗೆ, ಮಕ್ಕಳಿಗೆ ವೇದಿಕೆ ಒದಗಿಸುವುದರ ಜತೆಯಲ್ಲಿ ನಮ್ಮೊಳಗಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಸಹಾಯವಾಗುತ್ತದೆ ಎಂದರು. ಸ್ನೇಹಕೂಟ ರೂವಾರಿ ಆಶಾ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಮಹಿಳೆಯರು ಲಲಿತಾ ಸಹಸ್ರನಾಮ ಪಠಿಸಿದರು. ಕೂಟ ಬ್ರಾಹ್ಮಣರ ಕೇಂದ್ರೀಯ ಅಧಿವೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಹಿಳೆಯರನ್ನು ಗೌರವಿಸಲಾಯಿತು. ರಾಮಕೃಷ್ಣ ಜೋಶಿ, ಗಣೇಶ ಮಯ್ಯ, ವಾಸುದೇವ ನಾವಡ, ಪ್ರೇಮಾ ಕಾರಂತ ಇದ್ದರು. ಕಮಲಾಕ್ಷಿ ನಾವಡ ವಂದಿಸಿದರು.