ಹಗರಿಬೊಮ್ಮನಹಳ್ಳಿಯಲ್ಲಿ ಲಕ್ಷ್ಮೀ ಪಾಲಿ ಕ್ಲಿನಿಕ್‌ಗೆ ಟಿಎಚ್‌ಒ ಡಾ.ಎಚ್.ಎಂ.ಪ್ರವೀಣ್ ನೇತೃತ್ವದಲ್ಲಿ ಬೀಗ ಹಾಕಲಾಯಿತು. ವೈದ್ಯಾಧಿಕಾರಿ ಶಿವರಾಜ್, ಸಿಬ್ಬಂದಿ ಶ್ರೀನಿವಾಸ ರೆಡ್ಡಿ, ಶಿವಲಿಂಗಪ್ಪ, ಜಯಪ್ರಕಾಶ ಇದ್ದರು. 
ಜಿಲ್ಲೆ

ಪರವಾನಗಿ ಇಲ್ಲದ ಕ್ಲಿನಿಕ್‌ಗೆ ಬೀಗ

ಹಗರಿಬೊಮ್ಮನಹಳ್ಳಿ: ಚಿಕಿತ್ಸೆ ಪಡೆದ ನಂತರ ಮಹಿಳೆ ಸಾವಿಗೀಡಾದ ಹಿನ್ನೆಲೆಯಲ್ಲಿ ಪಟ್ಟಣದ ಕೂಡ್ಲಿಗಿ ವೃತ್ತದಲ್ಲಿರುವ ಲಕ್ಷ್ಮೀ ಪಾಲಿ ಕ್ಲಿನಿಕ್ ಮೇಲೆ ಟಿಎಚ್‌ಒ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಕೆಪಿಎಂಇ ಪರವಾನಗಿ ಪಡೆಯದ ಕ್ಲಿನಿಕ್‌ಗೆ ಬೀಗ ಹಾಕಿದರು.

ಡಾ.ಪಾಪಿಯಾ ರಾಯ್ ಎನ್ನುವವರ ಹೆಸರಿನ ಮೇಲೆ ಆಸ್ಪತ್ರೆ ತೆರೆಯಲಾಗಿತ್ತು. ಇಲ್ಲಿ ಡಾ.ಎಂ.ಸುಶಾಂತ ಮತ್ತು ಡಾ.ಅರುಣ್ ಆಸ್ಪತ್ರೆ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಡೆಂಘೆ ಜ್ವರಕ್ಕೆ ನಕ್ರಾಳ್ ತಾಂಡಾದ ಮಹಿಳೆ ಮೃತಪಟ್ಟಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸಾವಿಗೀಡಾಗಿದ್ದಾಳೆ ಎಂದು ಮೃತಳ ಮನೆಯವರು ದೂರು ನೀಡಿದ್ದರು. ಹೀಗಾಗಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದರು.

ಟಿಎಚ್‌ಒ ಡಾ.ಎಚ್.ಎಂ.ಪ್ರವೀಣ್, ಇಲ್ಲಿನ ಆಸ್ಪತ್ರೆಯಲ್ಲಿ ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದೇವೆ. ಕೆಪಿಎಂಇ ಪರವಾನಗಿ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಕಾನೂನು ಬಾಹಿರವಾಗಿದ್ದು, ನೋಟಿಸ್ ನೀಡಲಾಗಿದೆ. ಸೂಕ್ತ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರು ಇಂತಹ ಕ್ಲಿನಿಕ್‌ಗಳ ಬಗ್ಗೆ ಎಚ್ಚರವಹಿಸಬೇಕು. ಹಣದೊಂದಿಗೆ ಆರೋಗ್ಯ ಕೂಡ ಮುಖ್ಯ. ನಕಲಿ ವೈದ್ಯರು ನೀಡುವ ಔಷಧ ಪಡೆದು ತೊಂದರೆ ಅನುಭವಿಸಬಾರದು. ನಕಲಿ ಕ್ಲಿನಿಕ್, ವೈದ್ಯರ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಬಾಚಿಗೊಂಡನಹಳ್ಳಿಯ ವೈದ್ಯಾಧಿಕಾರಿ ಶಿವರಾಜ್, ಸಿಬ್ಬಂದಿ ಶ್ರೀನಿವಾಸ ರೆಡ್ಡಿ, ಶಿವಲಿಂಗಪ್ಪ, ಜಯಪ್ರಕಾಶ, ಲಿಂಗನಗೌಡ ಪಾಟೀಲ್ ಇದ್ದರು.