ಹುಬ್ಬಳ್ಳಿ: ಅಯೋಧ್ಯೆಯಲ್ಲಿ ನಿರ್ಮಾಣ ಆಗಲಿರುವ ಶ್ರೀ ರಾಮಮಂದಿರದ ಸ್ಥಳದಲ್ಲಿ ಶಿವಲಿಂಗವನ್ನೂ ಪ್ರತಿಷ್ಠಾಪಿಸಿ ಪೂಜಿಸಬೇಕು ಎಂದು ಆಗ್ರಹಿಸಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ನೇತೃತ್ವದಲ್ಲಿ ಶಿವಭಕ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಚಳವಳಿ ಹಮ್ಮಿಕೊಂಡಿದ್ದಾರೆ.
ನಗರದ ಬಂಕಾಪುರ ಚೌಕದಲ್ಲಿನ ಶ್ರೀಶೈಲ ಮಠದಲ್ಲಿ ಬುಧವಾರ ಮಧ್ಯಾಹ್ನ ಈ ಚಳವಳಿಗೆ ಚಾಲನೆ ನೀಡಲಾಯಿತು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ವಣಕ್ಕಾಗಿ ಭೂಮಿ ಸಮತಟ್ಟುಗೊಳಿಸುವಾಗ 5 ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿದೆ. ಶ್ರೀರಾಮನು ಪೂಜಿಸುವ ಶಿವಲಿಂಗ ಇದಾಗಿದ್ದು, ರಾಮನ ಜತೆ ಶಿವಲಿಂಗಕ್ಕೂ ಅಲ್ಲಿ ಮಂದಿರ ನಿರ್ವಿುಸಬೇಕು ಎಂದು ಶಿವಭಕ್ತರು ಆಗ್ರಹಿಸಿದರು.
ಸಂಸ್ಥೆಯ ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಅಯೋಧ್ಯೆಯಲ್ಲಿ ಸಿಕ್ಕಿರುವ ಶಿವಲಿಂಗವನ್ನು ಅಲ್ಲೇ ಮಂದಿರ ನಿರ್ವಿುಸಿ ಪ್ರತಿಷ್ಠಾಪಿಸಬೇಕು ಎಂದರು. ಅದಕ್ಕಾಗಿ ಆಗ್ರಹಿಸಿ ನಗರದ ಶಿವಭಕ್ತರು ಪ್ರಧಾನಿಗೆ 1,008ಕ್ಕೂ ಹೆಚ್ಚಿನ ಪತ್ರ ಬರೆಯಲಿದ್ದು, ಅವುಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖಾಂತರ ಪ್ರಧಾನಿಗೆ ತಲುಪಿಸಲಾಗುವುದು ಎಂದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ರಜತ ಉಳ್ಳಾಗಡ್ಡಿಮಠ, ಬಸವರಾಜ ಚನ್ನೋಜಿ, ಸಂಗಪ್ಪಣ್ಣ ಮೇಟಿ, ರವಿಕುಮಾರ ಬಡ್ನಿ, ಮಹಾಂತೇಶ ಗಿರಿಮಠ, ಶಂಭು ಲಕ್ಷೆ್ಮೕಶ್ವರಮಠ, ಮಲ್ಲಿಕಾರ್ಜುನ ಶಿರಗುಪ್ಪ, ಮಂಜುನಾಥ ನಾಯ್ಕರ, ಶಿವು ಬೆಂಡಿಗೇರಿ, ಬಸವರಾಜ ಗದ್ದಿಗೆಮಠ ಇತರರಿದ್ದರು.
ಮೂರು ಕ್ಷೇತ್ರಗಳ ಮೃತ್ತಿಕೆ ಸಂಗ್ರಹ
ಬಾಳೆಹೊನ್ನೂರು: ರಾಮಮಂದಿರ ನಿರ್ವಣಕ್ಕೆ ಶ್ರೀರಂಭಾಪುರಿ ಪೀಠ ಮುಂಭಾಗದ ಕಲ್ಪವೃಕ್ಷದ ಬುಡದಿಂದ ಸ್ವತಃ ತೆಗೆದ ಮೃತ್ತಿಕೆ ಜತೆ ಮಂತ್ರಾಕ್ಷತೆ ನೀಡಿ ವಿಎಚ್ಪಿ ಪದಾಧಿಕಾರಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಶುಭ ಹಾರೈಸಿದರು. ಮಂದಿರ ನಿರ್ವಣಕ್ಕೆ ಆ.5ರಂದು ಪ್ರಧಾನಿ ಶಿಲಾನ್ಯಾಸ ನೆರವೇರಿಸುವುದು ಸಂತಸ ತಂದಿದೆ. ಹಿಂದುಗಳ ನಿರೀಕ್ಷೆಯಂತೆ ಮಂದಿರ ನಿರ್ಮಾಣ ಕನಸು ನನಸಾಗುತ್ತಿರುವುದು ಹೆಮ್ಮೆ ತಂದಿದೆ ಎಂದು ಜಗದ್ಗುರುಗಳು ಹೇಳಿದರು.
ಶೃಂಗೇರಿ ಪೀಠದಿಂದ ಮೃತ್ತಿಕೆ ಪುಣ್ಯತೀರ್ಥ: ಶೃಂಗೇರಿ ಶ್ರೀ ಶಾರದಾ ಪೀಠದ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಸ್ವಾಮೀಜಿ ಮಂಗಳವಾರ ಮೃತ್ತಿಕೆ-ಪುಣ್ಯತೀರ್ಥವನ್ನು ವಿಎಚ್ಪಿ ಕಾರ್ಯಕರ್ತರಿಗೆ ಹಸ್ತಾಂತರಿಸಿ ಆಶೀರ್ವದಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್, ಆರ್ಎಸ್ಎಸ್ ಮುಖಂಡ ಕೆ.ಶ್ರೀಕಾಂತ್, ಮ್ಯಾಮ್ಕೋಸ್ ನಿರ್ದೇಶಕ ಟಿ.ಕೆ.ಪರಾಶರ ಇತರರಿದ್ದರು.
ಕೊಲ್ಲೂರಿನಿಂದ ಶುಭ ಹಾರೈಕೆ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಸಂಪಿಗೆ ಮರದಡಿಯ ಮೃತ್ತಿಕೆ, ಸೌಪರ್ಣಿಕೆಯ ತೀರ್ಥ ಸ್ವಯಂಭೂ ಪೀಠದಲ್ಲಿಟ್ಟು ಪೂಜಿಸಿ, ಶುಭ ಹಾರೈಕೆಯೊಂದಿಗೆ ನೀಡಲಾಗಿದೆ. ಪುರೋಹಿತ ಶ್ರೀಶ ಭಟ್, ಆಧ್ಯಾತ್ಮಿಕ ಗುರು ನೀಲಕಂಠ ಕರಬ, ವಿಎಚ್ಪಿ ಜಿಲ್ಲಾ ಸಹಕಾರ್ಯದರ್ಶಿ ಜಗದೀಶ್ ಕೊಲ್ಲೂರು, ಬಜರಂಗದಳ ತಾಲೂಕು ಸಂಚಾಲಕ ಶ್ರೀನಿವಾಸ ಮುದೂರು, ಮೂಕಾಂಬಿಕಾ ದೇವಸ್ಥಾನ ದೇವಯ್ಯ ಹೆಬ್ಬಾರ್ ಮತ್ತಿತರರಿದ್ದರು.
ಪಂಚಾಯತನ ಪ್ರಕಾರ ಆಗಲಿ ಸ್ಥಾಪನೆ
ಶಿರಸಿ: ರಾಮಜನ್ಮಭೂಮಿಯಲ್ಲಿ ಶಿವಲಿಂಗ ಸ್ಥಾಪಿಸುವುದು ಯೋಗ್ಯವಾಗಿದ್ದು, ಪಂಚಾಯತನ ಮಾದರಿಯಲ್ಲೇ ದೇವರ ಸ್ಥಾಪನೆ ಆಗಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಮಠದಲ್ಲಿ ಬುಧವಾರ ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಗಳು, ಪಂಚಾಯತನ ಪದ್ಧತಿಯಂತೆ ಶ್ರೀರಾಮನನ್ನು ಮಧ್ಯ ಸ್ಥಾಪಿಸಿ, ರಾಮನ ಈಶಾನ್ಯ ದಿಕ್ಕಿನಲ್ಲಿ ಶಿವಲಿಂಗವನ್ನು ಸ್ಥಾಪಿಸಬೇಕು. ಸುತ್ತ ಗಣಪತಿ, ಸೂರ್ಯ, ಅಂಬಿಕೆಯರನ್ನು ಸ್ಥಾಪಿಸಿದರೆ ಐದು ದೇವರುಗಳೂ ಆ ಕ್ಷೇತ್ರದಲ್ಲಿ ಸಂಯುಕ್ತರಾಗುತ್ತಾರೆ ಮತ್ತು ಶಿವನ ಸಾನ್ನಿಧ್ಯಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ. ಪಂಚಾಯತನ ಪದ್ಧತಿ ಶಂಕರ ಪರಂಪರೆಯಲ್ಲಿ ಇಂದಿಗೂ ಮುಂದುವರಿಯುತ್ತಿದೆ. ಕಾಶಿ ವಿಶ್ವನಾಥ ದೇವಾಲಯ ಸೇರಿ ಹಲವು ಪ್ರಸಿದ್ಧ ಕ್ಷೇತ್ರಗಳಲ್ಲೂ ಈ ಪದ್ಧತಿಯಲ್ಲೇ ಪ್ರತಿಷ್ಠಾಪನೆ ನಡೆದಿದೆ. ಈ ರೀತಿಯ ಸ್ಥಾಪನೆಯಿಂದ ಸಾಮರಸ್ಯ ಕಾಪಾಡಲು ಸಾಧ್ಯ. ಇದನ್ನು ಯಾವುದೇ ಕಾರಣಕ್ಕೂ ವಿವಾದಕ್ಕೆ ಎಡೆಮಾಡಬಾರದು ಎಂದು ನುಡಿದಿದ್ದಾರೆ.