ಕುಂದಾಪುರ ಪುರಸಭೆ ಸಾಮಾನ್ಯ ಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು.  
ಜಿಲ್ಲೆ

ಪಾರ್ಕಿಂಗ್ ಸಮಸ್ಯೆ ಬಗೆಹರಿಯಲಿ

Karthika K.S

ಕುಂದಾಪುರ: ಕುಂದಾಪುರ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ, ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರ ಆರೋಪ, ಅಧ್ಯಕ್ಷರಿಂದ ಕಿರುಕುಳ ಆರೋಪ, ಕೋಡಿಯಲ್ಲಿ ರೆಸಾರ್ಟ್ ನಿರ್ಮಾಣದಲ್ಲಿ ಒಳ ಒಪ್ಪಂದ ಮೊದಲಾದ ವಿಚಾರಗಳು ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿ, ಸದಸ್ಯರ ನಡುವೆ ವಾದ-ವಿವಾದಕ್ಕೆ ಕಾರಣವಾಯಿತು.

ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಗರದ ಪಾರ್ಕಿಂಗ್ ವಿಚಾರ ಪ್ರಸ್ತಾಪಿಸಿದ ಸದಸ್ಯ ಗಿರೀಶ್ ದೇವಾಡಿಗ, ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಬಗ್ಗೆ ಕಳೆದ 2 ವರ್ಷಗಳ ಹಿಂದೆಯೇ ನಿರ್ಣಯ ಮಾಡಿ ನೀಡಲಾಗಿದ್ದರೂ ಈವರೆಗೆ ಅದನ್ನು ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿದರು. ನಗರದ ಪಾಕಿರ್ಂಗ್ ಒತ್ತಡ ಕಡಿಮೆ ಮಾಡುವ ಬಗ್ಗೆ ದ್ವಿಚಕ್ರ, ನಾಲ್ಕು ವಾಹನಗಳಿಗೆ ಪ್ರತ್ಯೇಕ ಸ್ಥಳ ಗುರುತಿಸಿದ್ದನ್ನು ಸಂಚಾರ ಠಾಣೆ ಎಸ್‌ಐ ಪ್ರಸಾದ್ ಸಭೆಗೆ ತಿಳಿಸಿದರು.

ಪಾರ್ಕಿಂಗ್ ಜಾಗ ಗುರುತಿಸುವ ಮುನ್ನ ವ್ಯಾಪಾರಿಗಳ ಗಮನಕ್ಕೆ ತರಬೇಕು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಅಬ್ಬು ಮಹಮ್ಮದ್ ಹೇಳಿದರು. ನಗರದಲ್ಲಿ ವೀಲಿಂಗ್ ಮಾಡುವುದಕ್ಕೆ ಕಡಿವಾಣ ಹಾಕಿ, ರಾತ್ರಿ ವೇಳೆ ಬೆಂಗಳೂರಿಗೆ ತೆರಳುವ ಬಸ್ಸುಗಳಿಂದ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ ಎಂದು ಗಿರೀಶ ದೇವಾಡಿಗ ಆಗ್ರಹಿಸಿದರು.

ಬೆಂಗಳೂರಿಗೆ ತೆರಳುವ ಬಸ್‌ಗಳು 5 ನಿಮಿಷಕ್ಕೂ ಹೆಚ್ಚು ಕಾಲ ಶಾಸ್ತ್ರೀ ವೃತ್ತದ ಬಳಿ ನಿಲ್ಲದಂತೆ ಹಾಗೂ ಪ್ಲೈಓವರ್ ಅಡಿಯಲ್ಲಿ ಜನರನ್ನು ಹತ್ತಿಸಿಕೊಳ್ಳದಂತೆ ಬಸ್ ಚಾಲಕರಿಗೆ ಸೂಚನೆ ನೀಡಲಾಗಿದೆ ಎಂದು ಎಸ್‌ಐ ಪ್ರಸಾದ್ ಹೇಳಿದರು. ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಆಧಾರ ರಹಿತ ಭ್ರಷ್ಟಾಚಾರ ಆರೋಪ ಮಾಡಿ ಅಪಪ್ರಚಾರ ನಡೆಸಲಾಗುತ್ತಿದೆ. ಆರೋಪ ಮಾಡುವವರು ದಾಖಲೆ ಕೊಟ್ಟು ಮಾತಾಡಲಿ ಎಂದು ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಸವಾಲು ಹಾಕಿದರು. ಅಧ್ಯಕ್ಷ ವಿರುದ್ಧ ಆರೋಪ: ಅಧ್ಯಕ್ಷರ ಮನೆ ಮೇಲೆ ಮಹಡಿ ಕಟ್ಟಲು ಪರವಾನಗಿ ಪಡೆದಿಲ್ಲ. ಪ್ರಭಾವ ಬಳಸಿ ಡೋರ್ ನಂಬರ್ ಹಾಗೂ ಮೆಸ್ಕಾಂನಿಂದ ಎನ್‌ಒಸಿ ಪಡೆದಿದ್ದಾರೆ ಎಂದು ಚಂದ್ರಶೇಖರ್ ಖಾರ್ವಿ ಆರೋಪ ಮಾಡಿದರು. ಈ ಬಗ್ಗೆ ಮಾತಿನ ಚಕಮಕಿ ನಡೆಯಿತು. ಎಲ್ಲ ದಾಖಲೆಗಳನ್ನು ನೀಡಿ ಪರವಾನಗಿ ಪಡೆದುಕೊಂಡಿದ್ದು, ಪುರಸಭೆಯಲ್ಲಿ ಈ ದಾಖಲೆಗಳು ಸಿಕ್ಕಿದೆ. ಎಲ್ಲ ದಾಖಲೆಗಳೂ ಸರಿ ಇವೆ ಎಂದು ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಮುಖ್ಯಾಧಿಕಾರಿ ಆನಂದ್ ಜೆ. ಉಪಸ್ಥಿತರಿದ್ದರು.

ಕ್ಷಮೆ ಕೇಳಿದ ಸದಸ್ಯ

ಕೋಡಿಯಲ್ಲಿ ರೆಸಾರ್ಟ್ ಕಾಮಗಾರಿ ನಡೆಯುತ್ತಿದ್ದು ದಾಖಲೆಗಳು ಸರಿ ಇಲ್ಲ, ಭ್ರಷ್ಟಾಚಾರ ನಡೆದಿದೆ ಎಂದು ಅಧ್ಯಕ್ಷರ ವಿರುದ್ಧ ಸದಸ್ಯ ಅಶ್ಪಕ್ ಕೋಡಿ ಮಾಡಿದ್ದ ಭ್ರಷ್ಟಾಚಾರ ಆರೋಪ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದ ಬಳಿಕ ತಾನು ಆರೋಪ ಮಾಡಿದ್ದು ತಪ್ಪಾಯಿತು ಎಂದು ಸದಸ್ಯ ಅಶ್ಪಕ್ ಸಭೆಯಲ್ಲಿ ಕ್ಷಮೆ ಕೇಳಿದರು.

ಸದಸ್ಯೆ ಪರವಾಗಿ ವಿಪಕ್ಷ ನಾಯಕಿ ಕ್ಷಮೆ

ಅಧ್ಯಕ್ಷರ ಕುರಿತಾಗಿ ತಾನು ಹಾಕಿದ ವಾಟ್ಸಾಪ್ ಸ್ಟೇಟಸ್ ಬಗ್ಗೆ ರಾಘವೇಂದ್ರ ಖಾರ್ವಿ ಆಕ್ಷೇಪಿಸಿದ್ದು ಸರಿಯಲ್ಲ ಎಂದು ಸದಸ್ಯೆ ಪ್ರಭಾವತಿ ಶೆಟ್ಟಿ ಹೇಳುತ್ತಿದ್ದಂತೆಯೇ ಸಭೆಯಲ್ಲಿ ಮತ್ತೆ ಗೊಂದಲ ಏರ್ಪಟ್ಟಿತು. ಅಧ್ಯಕ್ಷರಿಂದಾಗಿ ನನಗೆ ಕಿರುಕುಳ ಆಗಿದೆ ಎಂದು ಪ್ರಭಾವತಿ ಶೆಟ್ಟಿ ಹೇಳುತ್ತಿದ್ದಂತೆಯೇ, ಅಧ್ಯಕ್ಷರಿಂದ ಏನು ಕಿರುಕುಳ ಆಗಿದೆ ಎಂದು ಬಹಿರಂಗಪಡಿಸುವಂತೆ ಸಂತೋಷ್, ರಾಘವೇಂದ್ರ ಖಾರ್ವಿ ಒತ್ತಾಯಿಸಿದರು. ವೈಯಕ್ತಿಕ ವಿಚಾರ ಇಲ್ಲಿ ತರಬೇಡಿ ಎಂದು ದೇವಕಿ ಸಣ್ಣಯ್ಯ, ಚಂದ್ರಶೇಖರ್ ಖಾರ್ವಿ ತಮ್ಮದೇ ಪಕ್ಷದ ಸದಸ್ಯೆ ಪ್ರಭಾವತಿ ಅವರಿಗೆ ಹೇಳಿದರು. ಪ್ರಭಾವತಿ ಕ್ಷಮೆ ಕೇಳಲು ಒಪ್ಪದಿದ್ದಾಗ ಸಭೆ ಮುಂದುವರಿಸುವ ಸಲುವಾಗಿ ವಿಪಕ್ಷ ನಾಯಕಿ ದೇವಕಿ ಸಣ್ಣಯ್ಯ ಕ್ಷಮೆ ಕೇಳಿದರು.