ಗೊಳಸಂಗಿ ಸಮೀಪದ ಕೂಡಗಿ ಎನ್‌ಟಿಪಿಸಿ ಮಹಾಶಕ್ತಿನಗರದ ಟೌನ್‌ಶಿಪ್‌ನಲ್ಲಿ ಏರ್ಪಡಿಸಿದ್ದ ಬಾಲಕಿಯರ ಸಬಲೀಕರಣ ತರಬೇತಿಗೆ ಎನ್‌ಟಿಪಿಸಿ ಸಿಜಿಎಂ ವಿಜಯಕೃಷ್ಣ ಪಾಂಡೆ ದಂಪತಿಗಳು ಚಾಲನೆ ನೀಡಿದರು. 
ಜಿಲ್ಲೆ

ಹೆಣ್ಣು ನಾಗರಿಕ ಸಮಾಜದ ಕಣ್ಣಾಗಲಿ: ವಿಜಯಕೃಷ್ಣ ಪಾಂಡೆ

ಗೊಳಸಂಗಿ: ಹೆಣ್ಣು ಇಂದು ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಸಾಮಾನ್ಯ ಜೀವವಲ್ಲ. ಪುರುಷ ಸಮಾಜಕ್ಕೆ ಸವಾಲೊಡ್ಡುವ ರೀತಿಯಲ್ಲಿ ಇಂದು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸಾಗಬೇಕು ಎಂದು ಕೂಡಗಿ ಎನ್‌ಟಿಪಿಸಿ ಚೀಪ್ ಜನರಲ್ ಮ್ಯಾನೇಜರ್ (ಸಿಜಿಎಂ) ವಿಜಯಕೃಷ್ಣ ಪಾಂಡೆ ಹೇಳಿದರು.

ಸಮೀಪದ ಎನ್‌ಟಿಪಿಸಿ ಮಹಾಶಕ್ತಿ ನಗರದ ಟೌನ್‌ಶಿಪ್‌ನಲ್ಲಿ ಸ್ಥಾವರ ವ್ಯಾಪ್ತಿಯ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮದಲ್ಲಿ 5ನೇ ತರಗತಿ ಪೂರೈಸಿದ 70 ವಿದ್ಯಾರ್ಥಿನಿಯರಿಗೆ ಒಂದು ತಿಂಗಳ ಕಾಲ ನಡೆಯುವ ಬಾಲಕಿಯರ ಸಬಲೀಕರಣ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಿಎಸ್‌ಆರ್ ಡಿಜಿಎಂ ಎಂ.ಎಚ್. ಮಂಜುನಾಥ ಮಾತನಾಡಿ, 70 ದಿನದ ಈ ತರಬೇತಿಯಲ್ಲಿ ಬಾಲಕಿಯರಿಗೆ ಮೂಲಭೂತ ಶಿಕ್ಷಣ, ಆರೋಗ್ಯ ಮತ್ತು ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಜತೆಗೆ ಇಂಗ್ಲೀಷ್, ವಿಜ್ಞಾನ, ಗಣಿತ, ಹಿಂದಿ, ಸಾಮಾನ್ಯ ಜ್ಞಾನ, ಕರಾಟೆ, ಯೋಗ, ನೃತ್ಯ, ಸಂಗೀತ, ಚಿತ್ರಕಲೆ, ಜೀವನಕೌಶಲ ಮತ್ತು ಪಠ್ಯೇತರ ಚಟುವಟಿಕೆಗಳ ವಿಷಯಗಳನ್ನು ಕಲಿಸಲಾಗುತ್ತದೆ ಎಂದರು.

ಪಾಲಕರ ಪರವಾಗಿ ಮಾತನಾಡಿದ ಗೊಳಸಂಗಿಯ ಅಮರೇಶಗೌಡ ಪಾಟೀಲ, ಮಸೂತಿಯ ಪ್ರಕಾಶ ಕಾಗಲ್, ಎನ್‌ಟಿಪಿಸಿ ಈ ಭಾಗದ ಶೈಕ್ಷಣಿಕ ರಂಗದ ಉನ್ನತಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಿದೆ. ಆದರೆ, ಅದೆಷ್ಟೋ ಮಕ್ಕಳು ಹೆತ್ತವರನ್ನು ಕಳೆದುಕೊಂಡು ಶಿಕ್ಷಣವಿರಲಿ ತುತ್ತು ಅನ್ನಕ್ಕೂ ಪರದಾಡುವ ದುಸ್ಥಿತಿಯ ಮಕ್ಕಳು ಈ ಸಮಾಜದಲ್ಲಿದ್ದಾರೆ. ಇಂಥವರಿಗೆ ಎನ್‌ಟಿಪಿಸಿ ಕೊಡುಗೆ ಏನು ಎಂದು ಕಳೆದ ವರ್ಷವೇ ಪ್ರಶ್ನಿಸಿದರೂ ಇದುವರೆಗೂ ಉತ್ತರ ದೊರಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಒ ಆ್ಯಂಡ್ ಎಂ ವಿಭಾಗದ ಜಿಎಂ ಬಿ.ಎನ್. ಝಾ, ಪ್ರೊಜೆಕ್ಟ್ ವಿಭಾಗದ ಜಿಎಂ ಅಲೋಕೇಶ ಬೆನರ್ಜಿ, ಆರೋಗ್ಯ ವಿಭಾಗದ ಸಿಎಂಒ ಡಾ. ರಾಜ್ ಬೋರಗಾಂವಕರ್, ಎಚ್‌ಆರ್ ವಿಭಾಗದ ಅನಿರುದ್ಧ ಸಿಂಗ್, ಎನ್‌ಟಿಪಿಸಿಯ ಎಲ್ಲ ಹಿರಿಯ ಅಧಿಕಾರಿಗಳು ಮತ್ತು ಮಿಥಾಲಿ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಇದ್ದರು.