More

    ಕ್ಷೇತ್ರಕ್ಕೆ ನಾಡಗೌಡರ ಕೊಡುಗೆ ಶೂನ್ಯ – ಎ.ಎಸ್. ಪಾಟೀಲ ನಡಹಳ್ಳಿ

    ಮುದ್ದೇಬಿಹಾಳ: ಕ್ಷೇತ್ರಕ್ಕೆ ನಾಡಗೌಡರ ಕೊಡುಗೆ ಶೂನ್ಯ. ಹೊಳಿದಂಡಿ ಗ್ರಾಮಗಳ ಪರಿಸ್ಥಿತಿ 2018ರಲ್ಲಿ ನನ್ನ ಆಯ್ಕೆಗೂ ಮೊದಲು ಹೇಗಿತ್ತು. ನನ್ನ ಆಯ್ಕೆಯ ನಂತರ ಏನಾಗಿದೆ ಅನ್ನೋದು ನಿಮ್ಮೆಲ್ಲರಿಗೂ ಗೊತ್ತಿದೆ. ಮತ ಕೇಳಲು ಬರುವ ಕಾಂಗ್ರೆಸ್‌ನವರಿಗೆ ನೀವು ಏನು ಮಾಡಿದ್ದೀರಿ ಎಂದು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸೂಚಿಸಿದರು.

    ತಾಲೂಕಿನ ಹಡಲಗೇರಿ, ಮುದ್ನಾಳ, ನೇಬಗೇರಿ, ಬನೋಶಿ, ಗೋನಾಳ, ದೇವೂರು, ಗಂಗೂರು, ಕಮಲದಿನ್ನಿ, ಕುಂಚಗನೂರ ಗ್ರಾಮಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ, ಬಹಿರಂಗ ಸಭೆ ನಡೆಸಿ, ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

    ಅಭಿವೃದ್ಧಿ ಮಾಡದವರು ಪುನರಾಯ್ಕೆ ಬಯಸಿದ್ದಾರೆ. ವಯಸ್ಸಾದವರು ಬೇಕೋ, ಕೆಲಸ ಮಾಡುವ ಯುವಕರು ಬೇಕೋ ನೀವೇ ತೀರ್ಮಾನಿಸಿ. ಚುನಾವಣೆಯಲ್ಲಿ ಸಾರಾಯಿ ಕುಡಿಸುವ ಕೆಲಸ ನಾನು ಮಾಡುವುದಿಲ್ಲ. ಅವರು ಸಾರಾಯಿ ಕೊಡುತ್ತಿದ್ದಾರೆ. ನೀವ್ಯಾವಾಗ ಕೊಡ್ತೀರಿ ಅಂತ ಕೆಲವರು ನನ್ನನ್ನು ಕೇಳ್ತಿದ್ದಾರೆ. ಅಂಥವರಿಗೆ ನಾನು ಸಾರಾಯಿ ಮಾತ್ರ ಕೊಡುವುದಿಲ್ಲ. ಹಾಲು, ಮೊಸರು ಬೇಕಾದರೆ ಕೇಳಿ ಕೊಡುತ್ತೇನೆ. ಸಾರಾಯಿ ಕುಡಿಸುವುದನ್ನು ನಾನು ಒಪ್ಪುವುದಿಲ್ಲ. ಅದು ಬಹಳ ಕೆಟ್ಟದ್ದು. ಹಾಲು ಕುಡಿಯಿರಿ, ಅಲ್ಕೋಹಾಲ್ ಕುಡಿಯಬೇಡಿ ಎಂದರು.

    ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹೆಣ್ಣುಮಕ್ಕಳಿಗೆ ಒಂದು ಹಸು ಕೊಡಿಸುವ ಉದ್ದೇಶ ಹೊಂದಿದ್ದೇನೆ. ಪ್ರತಿ ಮನೆಯ ತಾಯಿ ದಿನಕ್ಕೆ ಸಾವಿರ ರೂ. ಹಾಲು ಹಾಕುವಂತಾಗಬೇಕು. ತಿಂಗಳಿಗೆ ಆಕೆಗೆ 30ಸಾವಿರ ಆದಾಯ ಸಿಗುವಂತಾಗಬೇಕು. ಇದರಿಂದ ಆ ಕುಟುಂಬ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಂತಾಗುತ್ತದೆ ಎಂದರು.

    ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ ಮಾತನಾಡಿದರು. ಲಕ್ಷ್ಮಣ ಬಿಜ್ಜೂರ, ಸಂಗಣ್ಣ ಬಿಸಲದಿನ್ನಿ, ನಾಗರಾಜ ಕುಲಕರ್ಣಿ, ಶಿವಲಿಂಗಪ್ಪ ಹರಿಂದ್ರಾಳ, ಗದ್ದೆಪ್ಪ ಹುಲ್ಲೂರ, ವಿಠ್ಠಪ್ಪ ಹಳ್ಳೂರ, ಹಣಮಕಟ್ಟಿ, ಮುದ್ನಾಳದಲ್ಲಿ ಮುತ್ತಣ್ಣ ವಾಲಿಕಾರ, ಶಂಕ್ರಪ್ಪ ಹುನಗುಂದ, ಗೊಂದಪ್ಪ ಕೋಳೂರ, ರಾಮಣ್ಣ ದೋಟಿಹಾಳ, ಸಿದ್ದಪ್ಪ ದೋಟಿಹಾಳ, ಮುದಕಪ್ಪ ನಾಯನೇಗಲಿ, ಮಾನಸಿಂಗ ರಾಠೋಡ, ಶೇಖರಪ್ಪ, ಮಲಕಾಜಪ್ಪ ಇಟಗಿ, ಬಲದಂಡಪ್ಪ ಕೋಳೂರ, ಯಲ್ಲಪ್ಪ ಪೂಜಾರಿ ಇತರರಿದ್ದರು.

    ಈ ಚುನಾವಣೆಯಲ್ಲಿ ನನ್ನ ಮತ್ತು ನಾಡಗೌಡರ ನಡುವೆ ನೇರ ಹಣಾಹಣಿಯಿದೆ. 5ವರ್ಷದ ಹಿಂದೆ ನೀವು ಬದಲಾವಣೆ ಆಗಿ ನನ್ನನ್ನು ಆಯ್ಕೆ ಮಾಡಿದ್ದರಿಂದಲೇ ನಿಮ್ಮೂರು ಬದಲಾಗಿದೆ. 25ವರ್ಷ ಆಳ್ವಿಕೆ ಮಾಡಿದವರು ಏನು ಮಾಡಿದ್ದಾರೆ. ಅನ್ನೋದು ನಿಮಗೆಲ್ಲರಿಗೂ ಗೊತ್ತಿದೆ. ಈಗ ಮತ್ತೊಮ್ಮೆ ಬದಲಾಗಿ. ಕಣ್ಣು ಮುಚ್ಚಿಕೊಂಡು ವೋಟು ಹಾಕಬೇಡಿ. ಅಭಿವೃದ್ದಿ ಕೆಲಸ, ಸಾಧನೆ ಪರಿಗಣಿಸಿ ವೋಟ್ ಹಾಕಿ.
    ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ಅಭ್ಯರ್ಥಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts