ದಾವಣಗೆರೆ: ಚುನಾವಣಾ ವ್ಯವಸ್ಥೆ ಸುಧಾರಣೆಗಾಗಿ ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಜನಾಂದೋಲನ ರೂಪಿಸುವ ಅಗತ್ಯವಿದೆ. ಯುವಕರು ಇದರ ಪ್ರಮುಖ ಪಾಲುದಾರರಾಗಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಂದೋಲನ ಕುರಿತು ನಕಾರಾತ್ಮಕ ಆಲೋಚನೆ ಬೇಡ. ಪೂರ್ವಜರು ಹೀಗೆ ಯೋಚಿಸಿದ್ದರೆ ಭಾರತಕ್ಕೆ ಸ್ವಾತಂತ್ರೃ ಸಿಗುತ್ತಿರಲಿಲ್ಲ, ಅದು 75 ವರ್ಷದವರೆಗೆ ಬೆಳೆಯುತ್ತಲೂ ಇರಲಿಲ್ಲ. ಯುವಕರು ಪರಿವರ್ತನೆಯ ಹರಿಕಾರರಾಗಬೇಕು. ಬೇಜವಾಬ್ದಾರಿತನದಿಂದ ದೂರ ಉಳಿದರೆ ಶ್ರೀಲಂಕಾದಂತೆ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಾಂಗ ವ್ಯವಸ್ಥೆ ಇಂದು ಜಟಿಲಗೊಂಡಿದೆ. ಮಾನವೀಯತೆಯನ್ನೇ ಕಳೆದುಕೊಂಡಿದೆ. ಒಂದು ಶಿಕ್ಷಕ ಹುದ್ದೆ ಭರ್ತಿಗಾಗಿ ನನ್ನವರೆಗೆ ಬರಲು 125 ಹಂತ ತಲುಪಬೇಕಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಮೌಲ್ಯಾದರ್ಶದ ಕೊರತೆ ಕಾಣುತ್ತಿದ್ದೇವೆ. ಶಾಸಕಾಂಗ, ಪತ್ರಿಕಾರಂಗವೂ ಇದಕ್ಕೆ ಹೊರತಾಗಿಲ್ಲ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಸಂವಾದದಲ್ಲಿ ಅನೇಕರ ಪ್ರಶ್ನೆಗಳಿಗೆ ಕಾಗೇರಿ ಉತ್ತರಿಸಿದರು. ಶಾಸಕ ಎಸ್.ಎ.ರವೀಂದ್ರನಾಥ್, ಎಂಎಲ್ಸಿ ಅಬ್ದುಲ್ ಜಬ್ಬಾರ್, ಮೇಯರ್ ಜಯಮ್ಮ ಗೋಪಿನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ.ರಿಷ್ಯಂತ್ ಇತರರಿದ್ದರು.