ಜಿಲ್ಲೆ

ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ಆಗಲಿ

ಬೈಂದೂರು: ಸರ್ಕಾರಿ ಶಾಲೆ ಉಳಿದರೆ ಮಾತ್ರ ನಮ್ಮ ಖುಷಿ, ನೆನಪು ಹಾಗೂ ಸುಮಧುರ ಬಾಂಧವ್ಯ ಶಾಶ್ವತವಾಗಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. 300 ಟ್ರೀಸ್ ಕಲ್ಪನೆಯನ್ನು ಸಮೃದ್ಧ ಬೈಂದೂರು ಮೂಲಕ ಕಾರ್ಯರೂಪಕ್ಕೆ ತರಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿಯಲ್ಲಿ ಗಂಗನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಡುಪಿ ರೋಬೋಸಾಫ್ಟ್ ಟೆಕ್ನಾಲಜೀಸ್ ಸಿಎಸ್‌ಆರ್ ನಿಧಿಯಿಂದ ನಿರ್ಮಾಣಗೊಂಡ ಎರಡು ತರಗತಿ ಕೋಣೆ, ಪೀಠೋಪಕರಣ ಹಾಗೂ ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಬೈಂದೂರು ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶಾಲೆಗಳ ಪಟ್ಟಿ ಸಿದ್ಧಪಡಿಸಲಾಗಿದೆ. ದಾನಿಗಳ ಮೂಲಕ ಸರ್ಕಾರಿ ಶಾಲೆಗೆ ಬೇಕಿರುವ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಜಾರಿಯಲ್ಲಿದೆ ಎಂದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜು ಬಿ.ಮರಾಠಿ ಅಧ್ಯಕ್ಷತೆ ವಹಿಸಿದ್ದರು. ರೋಬೋಸಾಫ್ಟ್ ಸಂಸ್ಥೆಯ ಮುಖ್ಯಸ್ಥರಾದ ಕೃಷ್ಣರಾಜ್ ರಾವ್, ಗೋಪಾಲಕೃಷ್ಣ ಕಾಮತ್, ಚಕ್ರಿ ಹೆಗ್ಡೆ, ಶರತ್ ಆಚಾರ್ಯ ಹಾಗೂ ಶಾಸಕರನ್ನು ಸನ್ಮಾನಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ,, ಸುರೇಶ ಬಟ್ವಾಡಿ, ಗೋಪಾಲ ಪೂಜಾರಿ ವಸ್ರೆ, ಬಿಆರ್‌ಪಿ ಮಂಜುನಾಥ ನಾಯ್ಕ, ಸುಬ್ರಹ್ಮಣ್ಯ ಜೋಶಿ, ಕುಮಾರ್ ಮರಾಠಿ, ಗಣಪ ಜಿ.ಮರಾಠಿ, ಮುತ್ತಯ್ಯ ಮರಾಠಿ, ಸುಭಾಶ್ಚಚಂದ್ರ, ದೇವಪ್ಪ ಹಂದೆ, ಪವನ್ ನಾರಾಯಣ ಮರಾಠಿ, ಮುತ್ತಯ್ಯ ಮರಾಠಿ, ಚೆನ್ನಯ್ಯ ಪೂಜಾರಿ, ಭಾಗೀರಥಿ, ರಾಜೇಶ್ವರಿ ಸಿ.ಮರಾಠಿ, ಕೆನರಾ ಫೌಂಡೇಶನ್ ಸುಬ್ರಹ್ಮಣ್ಯ ಕೆ. ವಿ., ರಾಜು ಡಿ. ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಪ್ರಭಾಕರ ಬಿಲ್ಲವ ಸ್ವಾಗತಿಸಿದರು. ಶಿಕ್ಷಕಿ ಶಾರದಾ ನಿರೂಪಿಸಿದರು. ಸಹಶಿಕ್ಷಕ ರಾಘವೇಂದ್ರ ವಂದಿಸಿದರು.

ವಿಪರೀತ ಮಳೆಯಿಂದಾಗಿ ಗಂಗನಾಡು ಶಾಲೆಯ ತರಗತಿ ಕಟ್ಟಡಗಳು ಕುಸಿದಾಗ ಮಕ್ಕಳ ಶಿಕ್ಷಣದ ಬಗ್ಗೆ ಆತಂಕ ಎದುರಾಗಿತ್ತು. ರಿಪೇರಿಗೆ ಸರ್ಕಾರದ ಅನುದಾನ ಇರಲಿಲ್ಲ. ಉಡುಪಿಯ ರೋಬೋಸಾಫ್ಟ್ ಕಂಪನಿಗೆ ಮನವಿ ಮಾಡಿ, ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟ ಪ್ರಯತ್ನದಿಂದಾಗಿ ಇಂದು ಕುಗ್ರಾಮದ ಶಾಲೆಗೆ ಕಂಪೆನಿ 35 ಲಕ್ಷ ರೂ. ವೆಚ್ಚದಲ್ಲಿ ಎರಡು ತರಗತಿ ಕೋಣೆಗಳನ್ನು ನಿರ್ಮಿಸಿಕೊಟ್ಟಿದೆ. -ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ