ಬಾದಾಮಿ ಪಟ್ಟಣದ ಎಸ್.ಬಿ. ಚನ್ನಪ್ಪಗೌಡರ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ 5 ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಇಂಜಿನಿಯರ್ ಆರ್.ಬಿ. ಚೊಳಚಗುಡ್ಡ ಸಮವಸ್ತ್ರ ವಿತರಿಸಿದರು. ಎಸ್.ಜಿ. ಕಾರುಡಗಿಮಠ, ಎಸ್.ಎಂ. ಹಿರೇಮಠ, ಮುಖ್ಯಶಿಕ್ಷಕ ಪಿ.ಎ. ಹಿರೇಮಠ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಲಿ

ಗಿರೀಶ ಸಗರ

ಬಾದಾಮಿ: ಸತತ ಪ್ರಯತ್ನ, ನಿರ್ದಿಷ್ಟ ಗುರಿ ಇಟ್ಟುಕೊಂಡು ಅಧ್ಯಯನಶೀಲರಾದರೆ ಮಾತ್ರ ಅವರ ಬದುಕು ಸಂದರವಾಗಬಲ್ಲದು ಎಂದು ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಧರ ಫತ್ತೇಪೂರ ಹೇಳಿದರು.

ಎಸ್.ಬಿ. ಚನ್ನಪ್ಪಗೌಡರ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ದಾನಿಗಳು, ಸಂಸ್ಥೆ ವತಿಯಿಂದ ನೀಡಿದ ನಗದು ಬಹುಮಾನವನ್ನು ವಿದ್ಯಾರ್ಥಿನಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉಪಚೇರ್ಮನ್ ಎಸ್.ಜಿ. ಕಾರುಡಗಿಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿ.ಎಂ. ಕಲ್ಯಾಣಶೆಟ್ಟಿ ಪ.ಪೂ. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಪಾರ್ವತಿ ಲೆಂಕೆನ್ನವರ ಮಾತನಾಡಿ, ವಿದ್ಯಾರ್ಥಿನಿಯರು ಶಿಕ್ಷಣದೊಂದಿಗೆ ನೈತಿಕ ಮೌಲ್ಯ ಅಳವಡಿಸಿಕೊಂಡು ಆತ್ಮವಿಶ್ವಾಸ, ಏಕಲವ್ಯನ ಶ್ರದ್ಧೆ ಹೊಂದಿ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

5 ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶಾಲಾ ಸಮವಸ ನೀಡಿದ ಇಂಜಿನಿಯರ್ ಆರ್.ಬಿ. ಚೊಳಚಗುಡ್ಡ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ 25,000 ರೂ. ಠೇವಣಿಯಾಗಿ ಇಟ್ಟ ಪಾರ್ವತಿ ಲೆಂಕೆನ್ನವರ ಅವರನ್ನು ಸನ್ಮಾನಿಸಲಾಯಿತು.

ಶಶಿಕಲಾ ಸಂಗನಬಸಪ್ಪ ಪಟ್ಟಣಶೆಟ್ಟಿ ಕೊಡಮಾಡಿದ 50 ನೋಟ್‌ಬುಕ್‌ಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಶಾಲಾ ಸುಧಾರಣಾ ಸಮಿತಿ ಚೇರ್ಮನ್ ಎಸ್.ಎಂ. ಹಿರೇಮಠ ಮಾತನಾಡಿದರು.

ಶಾಲೆ ಸುಧಾರಣಾ ಸಮಿತಿ ಸದಸ್ಯ ಎಂ.ಎಸ್. ಹಿರೇಹಾಳ ಇದ್ದರು.

ಮುಖ್ಯಶಿಕ್ಷಕ ಪಿ.ಎ. ಹಿರೇಮಠ ಸ್ವಾಗತಿಸಿದರು. ಜೆ.ಎಂ. ಮಿಟ್ಟಲಕೋಡ ಪರಿಚಯಿಸಿದರು. ಎನ್.ಬಿ. ಶೀಲವಂತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.