ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಂಡಿರುವ ಹಾಗೂ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಬಗ್ಗೆ ಜಿಲ್ಲಾ ಕೇಂದ್ರದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಸಭೆ ನಡೆಸಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪ್ರಸ್ತುತ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಜತೆಗೆ ಕೇಂದ್ರದಿಂದ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ವೇಗ ನೀಡುವ ಸಲುವಾಗಿ ನಿರಂತರವಾಗಿ ಕ್ಷೇತ್ರ ಭೇಟಿ ಮಾಡಿ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳು ಮಾಹಿತಿ ಪಡೆಯಬೇಕು. ಕೇಂದ್ರ ಅಥವಾ ರಾಜ್ಯದ ಯಾವುದೇ ಜನೋಪಯೋಗಿ ಯೋಜನೆ ಅನುಷ್ಠಾನದಲ್ಲಿ ಕ್ಷೇತ್ರವು ಹಿಂದೆ ಬೀಳಬಾರದು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಎಚ್ಚರಿಕೆ ವಹಿಸಬೇಕು. ಅನುಷ್ಠಾನ ಲೋಪವೂ ಆಗಬಾರದು. ನಿರ್ದಿಷ್ಟ ಕಾಲಮಿತಿಯಲ್ಲಿ ಯೋಜನೆ ಜಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಗಂಟಿಹೊಳೆ ಸೂಚಿಸಿದರು.
ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮ ವಾರಾಹಿ ಯೋಜನೆ ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ, ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಅಭಿಯಂತರ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.