ಜಿಲ್ಲೆ

ಆರೋಪಿಸುವ ಬಿಜೆಪಿಗರು ಮಜ್ಜಾರು ಕ್ಷೇತ್ರಕ್ಕೆ ಬರಲಿ: ಸುಧೀರ್​ ಕುಮಾರ್​ ಶೆಟ್ಟಿ ಸವಾಲು

Avinash R

ಕಡಬ: ಬಿಳಿನೆಲೆಯ ಸಂದೀಪ್​ ಕೊಲೆ ಪ್ರಕರಣದಲ್ಲಿ ಬಿಜೆಪಿ ನೀಚ ರಾಜಕಾರಣ ಮಾಡಿ ಕಾಂಗ್ರೆಸ್​ ಮುಖಂಡ ಶಾಮೀಲಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.

ಆರೋಪವನ್ನು ಸಾಬೀತು ಮಾಡಬೇಕು. ಇಲ್ಲವೇ ಮಜ್ಜಾರು ಕ್ಷೇತ್ರಕ್ಕೆ ಬಂದು ಹೇಳಬೇಕು ಎಂದು ಕಡಬ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸುಧೀರ್​ ಕುಮಾರ್​ ಶೆಟ್ಟಿ ಸವಾಲು ಹಾಕಿದ್ದಾರೆ.

ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನಾಕಾರಣ ನನ್ನನ್ನು ಗುರಿಯಾಗಿಸಿ ಹೇಳಿಕೆ ನೀಡಿದವರ ವಿರುದ್ಧ ನಾನು ಅಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಪ್ರಾರ್ಥನೆ ಸಲ್ಲಿಸುತ್ತೇನೆ. ಕಾನೂನು ಹೋರಾಟವನ್ನೂ ಮಾಡುತ್ತೇನೆ ಎಂದರು.

ನನಗೆ ಮಾಹಿತಿ ಬಂದ ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದೇನೆ. ಸುಧೀರ್​ ಶೆಟ್ಟಿ ಹತ್ಯೆಗೆ ಪೂರಕವಾದ ಕೆಲಸ ಮಾಡಿದವರನ್ನು ಕೂಡಾ ಬಂಧಿಸಬೇಕು. ಕೊಳೆತ ಶವವನ್ನು ಪಂಚಾಯಿತಿ ಎದುರು ಇಟ್ಟು ಮೃತನ ಕುಟುಂಬದವರನ್ನು ಕರೆ ತಂದು 3 ಗಂಟೆ ಪ್ರತಿಭಟನೆ ಮಾಡಿದ್ದಾರೆ. ಇದೊಂದು ಕೆಟ್ಟ ರಾಜಕೀಯ ನಡೆ. ಆರೋಪಿ ಪ್ರತಿಕ್​ನ ಬಂಧನ ಆಗುವ ಮುಂಚೆ ಆತ ಎಲ್ಲಿದ್ದ, ಯಾರ ಜತೆ ಇದ್ದ, ಯಾರ ಮನೆಯಲ್ಲಿ ಇದ್ದ? ಎನ್ನುವುದರ ಬಗ್ಗೆ ತನಿಖೆಯಾಗಬೇಕು ಎಂದರು.

ಬಿಳಿನೆಲೆ ಗ್ರಾಪಂ ಅಧ್ಯೆ ಶಾರದಾ ದಿನೇಶ್​ ಮಾತನಾಡಿ, ಬೀದಿಯಲ್ಲಿ ಬಾಯಿಗೆ ಬಂದ ಹಾಗೆ ಬೈದು ಮುಜುಗರ ಉಂಟು ಮಾಡಿದ್ದರೂ ನಾನು ಅಂತ್ಯಸಂಸ್ಕಾರ ನಡೆಯುವ ತನಕ ಅಲ್ಲಿದ್ದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು ಯಾರೂ ಅಲ್ಲಿರಲಿಲ್ಲ. ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕೆಂದು ಪಂಚಾಯಿತಿಯಲ್ಲಿ ರ್ನಿಣಯ ಅಂಗೀಕರಿಸಲಾಗಿದೆ ಎಂದರು.

ಬಿಳಿನೆಲೆ ಗ್ರಾಪಂ ಉಪಾಧ್ಯಕ್ಷ ಶಿವಶಂಕರ್​, ಸದಸ್ಯರಾದ ಸತೀಶ್​ ಕಳಿಗೆ, ಬೇಬಿ ಉಮೇಶ್​, ಚಂದ್ರಾವತಿ ವಾಲ್ತಾಜೆ, ಕಾಂಗ್ರೆಸ್​ ಮುಖಂಡ ನಾಗೇಶ್​ ಬೈಲು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.