ತಂತಿ ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆ ಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿದರು.  
ಜಿಲ್ಲೆ

ತಂತಿ ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆ: ಕಾರ್ಯಾಚರಣೆ ನಡೆಸಿ ರಕ್ಷಿಸಿದ ಅರಣ್ಯ ಇಲಾಖೆ

ಹೆಬ್ರಿ: ತಂತಿ ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಿಸಿರುವ ಘಟನೆಯು ಕುಕ್ಕೆಹಳ್ಳಿ-ಹಿರಿಯಡ್ಕ ರಸ್ತೆಯ ಬಕ್ಕಾರೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು

ಸರ್ಕಾರಿ ಜಾಗದಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿಯಲ್ಲಿ 4-5ವರ್ಷ ಪ್ರಾಯದ ಗಂಡು ಚಿರತೆಯೊಂದು ಬೆಳಗ್ಗಿನ ವೇಳೆ ಸಿಲುಕಿಕೊಂಡಿತ್ತು. ತಂತಿ ಚಿರತೆ ಸೊಂಟ ಭಾಗಕ್ಕೆ ಉರುಳು ಬಿದ್ದಿರುವುದರಿಂದ ಚಿರತೆ ನರಳಾಡುತ್ತಿತ್ತು. ಮಧ್ಯಾಹ್ನ ವೇಳೆ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಚಿಕಿತ್ಸೆ ನೀಡಿದ ಬಳಿಕ ಅರಣ್ಯಕ್ಕೆ

ಮಧ್ಯಾಹ್ನ 3ಕ್ಕೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಮಂಗಳೂರಿನ ಅರವಳಿಕೆ ತಜ್ಞ ಯಶಸ್ವಿ ನಾರಾವಿ ಹಾಗೂ ಅಕ್ಷಯ್ ಶೇಟ್ ಚಿರತೆಗೆ ಶೂಟ್ ಮಾಡಿ ಅರಿವಳಿಕೆ ಔಷಧ ನೀಡಿದರು. ಪ್ರಜ್ಞೆ ತಪ್ಪಿದ ಚಿರತೆ ಬೋನಿನೊಳಗೆ ಹಾಕಿ, ನಿಗಾದಲ್ಲಿ ಇರಿಸಲಾಯಿತು. ಬಳಿಕ ಚಿಕಿತ್ಸೆ ನೀಡಿ ಅದನ್ನು ಅರಣ್ಯಕ್ಕೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ಧೇಶ್ವರ ಕುಂಬಾರ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್, ನವೀನ್ ಡಿ.ಎನ್., ಗಸ್ತು ಅರಣ್ಯ ಪಾಲಕರಾದ ಅರುಣ್, ಶ್ರೀಕಾಂತ್, ಪ್ರವೀಣ್, ಅರಣ್ಯ ವೀಕ್ಷಕರಾದ ಸಂಕ, ಸುದರ್ಶನ್, ಪೊಲೀಸ್ ಹಿರಿಯಡ್ಕ ಎಸ್ಸೈ ಮಂಜುನಾಥ್ ಇದ್ದರು.