ಜಿಲ್ಲೆ

ಬೋವಿಕ್ಕಾನದಲ್ಲಿ ಚಿರತೆ ಗುಂಪು ಓಡಾಟ : ಆತಂಕಕ್ಕೀಡಾದ ಜನತೆ

ಸೌಮ್ಯ ಆರ್

ಕಾಸರಗೋಡು: ಮುಳಿಯಾರು ಪಂಚಾಯಿತಿಯ ವಿವಿಧೆಡೆ ಕಳೆದ ಕೆಲ ಸಮಯದಿಂದ ಚಿರತೆ ಹಾವಳಿ ಹೆಚ್ಚಾಗುತ್ತಿದ್ದಂತೆ, ಇದೇ ಮೊದಲ ಬಾರಿಗೆ ಕಾನತ್ತೂರು ಪ್ರದೇಶದಲ್ಲಿ ಚಿರತೆ ಗುಂಪಾಗಿ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿರುವುದಾಗಿ ಮಾಹಿತಿಯಿದೆ. ಇದರಿಂದ ಬೋವಿಕ್ಕಾನ ಆಸುಪಾಸಿನ ಜನತೆ ಆತಂಕಕ್ಕೀಡಾಗಿದ್ದಾರೆ.

ಕಾನತ್ತೂರು ಪಾಯೋತ್ ನಿವಾಸಿ ದೈವನರ್ತಕ ಕೃಷ್ಣನ್ ಅವರ ಮನೆಯ ಪರಿಸರದಲ್ಲಿ ಗುರುವಾರ ನಸುಕಿಗೆ ಐದು ಚಿರತೆಗಳು ಸಂಚರಿಸುತ್ತಿರುವುದು ಕಂಡು ಬಂದಿತ್ತು. ಕೃಷ್ಣನ್ ಅವರ ಪುತ್ರ ದೈವಕೋಲ ಕಾರ್ಯಕ್ರಮ ಮುಗಿಸಿ ಮನೆಗೆ ತಲುಪಿದಾಗ ಚಿರತೆಯ ಗುಂಪು ಸಂಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಮನೆ ಟೆರೇಸ್‌ಗೆ ಏರಿ ಟಾರ್ಚ್ ಬೆಳಕು ಹಾಯಿಸಿದಾಗ ಕುರುಚಲು ಪೊದೆಯಲ್ಲಿ ಮರೆಯಾಗಿತ್ತು.

ಕೊಡವಂಜಿ ಅಡ್ಕ ರಸ್ತೆಯ ರಾಜನ್ ಎಂಬುವರ ಮನೆಯ ಬಳಿ ಚಿರತೆಯೊಂದು ಸಾಕುನಾಯಿಯನ್ನು ಕಚ್ಚಿ ಕೊಂಡೊಯ್ಯುವ ದೃಶ್ಯವೂ ಕಂಡುಬಂದಿತ್ತು. ಇರಿಯಣ್ಣಿ, ಪೇರಡ್ಕ, ವಣ್ಣಾರತ್ ಮೂಲ ಮುಂತಾದೆಡೆ ಚಿರತೆ ಸಂಚಾರದಿಂದ ಜನತೆ ಆತಂಕಕ್ಕೀಡಾಗಿದ್ದಾರೆ. ಅರಣ್ಯಾಧಿಕಾರಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿ ಚಿರತೆಯ ಇರುವಿಕೆಯನ್ನು ದೃಢಪಡಿಸಿದ್ದರೂ, ಚಿರತೆ ಪತ್ತೆ ಸಾಧ್ಯವಾಗಿರಲಿಲ್ಲ. ಇರಿಯಣ್ಣಿ, ಕರ್ಮಂತೋಡಿ ಎಂಬೆಡೆಗಳಲ್ಲಿ ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಬೋನು ಇರಿಸಲಾಗಿದೆ.