ಉಳ್ಳಾಲ: 16ನೇ ಶತಮಾನದಲ್ಲಿ ತುಳುನಾಡನ್ನು ಆಳಿದ ಧೀರ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕ. ಪೋರ್ಚುಗೀಸ್ ವಸಾಹತುಶಾಹಿ ಶಕ್ತಿಯ ವಿರುದ್ಧ ಹೋರಾಡಿದ ಅಬ್ಬಕ್ಕಳ ಸ್ಮರಣೆ ಮಾಡಬೇಕಾಗಿದೆ. ಆಕೆ ಸ್ವಾಭಿಮಾನ, ಸ್ವಾವಲಂಬನೆಯ ಪ್ರತೀಕ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯೆ ವಿಜಯಲಕ್ಷ್ಮೀ ಪ್ರಸಾದ್ ರೈ ಹೇಳಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗೂ ತಲಪಾಡಿ ಶಾರದಾ ಕಾಲೇಜಿನ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾದ ಅಬ್ಬಕ್ಕ-500 ಪ್ರೇರಣಾದಾಯಿ ಉಪನ್ಯಾಸ ಸರಣಿ ಎಸಳು 58ನೇ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಚಂದ್ರಹಾಸ ಕಾರ್ಯಕ್ರಮ ಉದ್ಘಾಟಿಸಿ, ಅಚಲವಾದ ದೇಶಭಕ್ತಿ ಮಹಿಳಾ ಜಾಗೃತಿ, ಸ್ತ್ರೀ ಸಬಲೀಕರಣದಲ್ಲಿ ಅಬ್ಬಕ್ಕ ಮೊದಲಿಗರಾಗಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಮೀನಾ ಜಿ.ಪಣಿಕ್ಕರ್ ಮಾತನಾಡಿ, ರಾಣಿ ಅಬ್ಬಕ್ಕಳ ದೇಶಾಭಿಮಾನದ ಕಿಚ್ಚು ಇಂದಿಗೂ ಆದರ್ಶಪ್ರಾಯವಾಗಿದೆ. ದೇಶದ ಮಹಾಪುರುಷರ, ಸ್ವಾತಂತ್ರೃ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಯೋಜಕಿ ಜಯಲಕ್ಷ್ಮೀ ಆರ್.ಶೆಟ್ಟಿ, ಉಪನ್ಯಾಸಕಿ ಅಮಿತಾ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮೃದುಳಾ ಸ್ವಾಗತಿಸಿದರು. ಮಾಧ್ಯಮ ಪ್ರಮುಖ್ ಮಮತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸೀನ್ ವಂದಿಸಿದರು. ವರ್ಷಾ ಕಾರ್ಯಕ್ರಮ ನಿರೂಪಿಸಿದರು.