ಹನುಮಸಾಗರ ಸಮೀಪದ ಮಿಯ್ಯಪೂರ ಸಹಿಪ್ರಾ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಆಟದ ದಿನ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ ಮಾತನಾಡಿದರು. ಜಂಪ್‌ರೋಪ್ ಸಂಸ್ಥೆ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೈಲರ್, ಸಿಆರ್‌ಪಿ ಅಯ್ಯಪ್ಪ ಸುರುಳ ಇದ್ದರು. 
ಜಿಲ್ಲೆ

ಕಲಿಕಾ ಅವಕಾಶ ಪ್ರಬಲಗೊಳಿಸಲಿದೆ ಕ್ರೀಡೆ

Kopala - Desk - Eraveni

ಹನುಮಸಾಗರ: ಕ್ರೀಡೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಜಂಪ್‌ರೋಪ್ ಸಂಸ್ಥೆ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೇಲರ್ ಹೇಳಿದರು.

ಸಮೀಪದ ಮಿಯ್ಯಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಆಟದ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಸಂಸ್ಥೆ ಜೂ.11ಅಂತಾರಾಷ್ಟ್ರೀಯ ಆಟದ ದಿನವೆಂದು ಘೋಷಿಸಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಒಪ್ಪಿರುವ ಎಲ್ಲ ದೇಶಗಳು ಇದಕ್ಕೆ ಬದ್ಧರಾಗಿವೆ. ಮಕ್ಕಳು ಆಟದ ಮೂಲಕ ಉತ್ತಮವಾಗಿ ಕಲಿಯುತ್ತಾರೆ. ಭೌತಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆ ಜತೆಗೆ ಕಲಿಕಾ ಅವಕಾಶಗಳನ್ನು ಕ್ರೀಡೆ ಸೃಷ್ಟಿಸುತ್ತದೆ ಎಂದರು.

ಸಿಆರ್‌ಪಿ ಅಯ್ಯಪ್ಪ ಸುರುಳ ಮಾತನಾಡಿ, ಮಕ್ಕಳಿಗೆ ಪಾಠದ ಜತೆಗೆ ಆಟಬೇಕು. ಆಟ ಆಡಲು ಅವಕಾಶಗಳನ್ನು ನಿರ್ಬಂಧಿಸುವುದು ಮಗುವಿನ ಯೋಗ ಕ್ಷೇಮ ಮತ್ತು ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮಕ್ಕಳ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಸಮಾವೇಶ 31ನೇ ವಿಧಿಯ ಅಡಿಯಲ್ಲಿ ಆಟವನ್ನು ಪ್ರತಿ ಮಗುವಿನ ಮೂಲಭೂತ ಹಕ್ಕಾಗಿಸಿದೆ ಎಂದರು.

ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ ಮಾತನಾಡಿ, ಅಂತಾರಾಷ್ಟ್ರೀಯ ಆಟದ ದಿನವು ಜಾಗತಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಆಟದ ಮಹತ್ವ ಹೆಚ್ಚಿಸಲು ಒಂದು ಒಗ್ಗಟ್ಟಿನ ಕ್ಷಣವನ್ನು ಸೃಷ್ಟಿಸುತ್ತದೆ ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು ರವಿಕುಮಾರ ಮಡಿವಾಳರ, ಜಂಪ್‌ರೋಪ್ ಸಂಸ್ಥೆ ರಾಜ್ಯ ಕಾರ್ಯದರ್ಶಿ ಅಬ್ದುಜ್ ರಜಾಕ್ ಟೈಲರ್, ಸಿಆರ್‌ಪಿ ಅಯ್ಯಪ್ಪ ಸುರಳ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ನಾಗನಗೌಡ ಪಾಟೀಲ್, ಶಾಂತಾಬಾಯಿ ಪಟ್ಟಣಶೆಟ್ಟಿ, ಪರಶುರಾಮಪ್ಪ ನಾಗಣ್ಣನವರ, ಲಕ್ಷ್ಮೀ ವಾಲಿಕಾರ, ಸಂಗಮ್ಮ ಮಣ್ಣೇರಿ, ಲಕ್ಷ್ಮೀ ಮಾಲಿಪಾಟೀಲ ಇತರರಿದ್ದರು.