ಮನೋಹರ ಬಳಂಜ ಬೆಳ್ತಂಗಡಿ
ಬೆಳ್ತಂಗಡಿ ತಾಲೂಕಿನ ಗ್ರಾಮಗಳಾದ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ ಗ್ರಾಮಗಳಲ್ಲಿ ಕಂಡುಬಂದಿದ್ದ ಎಲೆಚುಕ್ಕಿ ರೋಗ ಈಗ ಮುಂಡಾಜೆ ಗ್ರಾಮಕ್ಕೂ ಹರಡಿದೆ. ಮುಂಡಾಜೆಯ ದುಂಬೆಟ್ಟು, ಮಜಲು ಮುಂಡಾಜೆ, ಸತ್ಯನಪಲಿಕೆ ಮೊದಲಾದ ಕಡೆಯ ಹತ್ತಾರು ತೋಟಗಳಲ್ಲಿ ಎಲೆಚುಕ್ಕಿ ರೋಗ ಕಂಡುಬಂದಿದ್ದು, ನೂರಾರು ಅಡಕೆ ಮರಗಳು ಮುರಿದು ಬಿದ್ದಿದ್ದರೆ ಹಲವು ಅಡಕೆ ಮರಗಳಿಗೆ ರೋಗ ಪಸರಿಸುತ್ತಿದೆ.
ಕಳೆದ ಎರಡು ತಿಂಗಳಿನಿಂದ ಈ ರೋಗ ಮುಂಡಾಜೆಯ ಅಡಕೆ ತೋಟಗಳನ್ನು ಆಕ್ರಮಿಸುತ್ತಿದ್ದು, ಈಗ ಅದರ ತೀವ್ರತೆ ಹೆಚ್ಚಾಗಿ ಅಡಕೆ ಕೃಷಿಕರು ಕಂಗಾಲಾಗಿದ್ದಾರೆ. ಕೃಷಿ ಪ್ರಧಾನ ಗ್ರಾಮವಾಗಿರುವ ಮುಂಡಾಜೆಯಲ್ಲಿ ಅಡಕೆ ಮುಖ್ಯ ಬೆಳೆ. ಇಲ್ಲಿನ ನೂರಾರು ಕುಟುಂಬಗಳಿಗೆ ಅಡಕೆ ತೋಟಗಳೇ ಜೀವನಾಧಾರ. ಪ್ರಸ್ತುತ ಇಲ್ಲಿ ಕೃಷಿ ಕುಟುಂಬಗಳಿಗೆ ಮಾರಕವಾಗಿದೆ.
ಕಳೆದ ವರ್ಷ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದಲ್ಲಿ ಆರಂಭವಾಗಿದ್ದ ಈ ರೋಗ ಅಲ್ಲಿನ ತೋಟಗಳನ್ನು ಸಂಪೂರ್ಣ ನಿರ್ನಾಮ ಮಾಡಿದೆ. ಇಲ್ಲಿನ ಹೆಚ್ಚಿನ ತೋಟಗಳಲ್ಲಿನ ಅಡಕೆ ಮರಗಳು ರೋಗಕ್ಕೆ ಆಹುತಿಯಾಗಿದ್ದು, ಅಲ್ಲಿನ ಜನ ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ದಿಡುಪೆ, ಮಿತ್ತಬಾಗಿಲು, ಕಡಿರುದ್ಯಾವರ ಗ್ರಾಮಗಳಿಗೂ ರೋಗ ಹರಡಿತ್ತು. ಆದರೆ ಈ ವಷರ್ ಈ ರೋಗ ಮುಂಡಾಜೆಗೂ ಹಬ್ಬಿದೆ. ಮಳೆಯ ತೀವ್ರತೆ ಕಡಿಮೆಯಾಗುತ್ತಿದ್ದಂತೆ ರೋಗ ಲಕ್ಷಣಗಳು ಕಂಡುಬರುತ್ತಿವೆ.
ರೈತರ ಫಸಲು ನಷ್ಟ
ಈ ವರ್ಷ ಎಡೆಬಿಡದೆ ಸುರಿದ ಮಳೆ ಈ ರೋಗಕ್ಕೆ ಕಾರಣವೇ ಎಂದು ಕೃಷಿಕರು ಚಿಂತೆಗೊಳಗಾಗಿದ್ದಾರೆ. ಕಳೆದ ಹಲವು ವಷರ್ಗಳಿಗೆ ಹೋಲಿಸಿದರೆ ಈ ವಷರ್ ಭಾರಿ ಮಳೆ ಸುರಿದಿದೆ. ಮಳೆಯ ಕಾರಣ ಬೋರ್ಡೋ ಮಿಶ್ರಣ ಸಿಂಪಡಿಸಲು ಕೃಷಿಕರಿಗೆ ತೊಂದರೆಯಾಗಿತ್ತು. ಇದರಿಂದ ಹೆಚ್ಚಿನ ತೋಟಗಳಲ್ಲಿ ಕೊಳೆರೋಗ ಕಂಡುಬಂದಿದ್ದು, ಸಾಕಷ್ಟು ಫಸಲು ನಷ್ಟವಾಗಿದೆ. ತೋಟದ ಅಲ್ಲಲ್ಲಿ ಎಲೆಚುಕ್ಕಿ ರೋಗ ಕಂಡುಬರುತ್ತಿದ್ದು, ಉತ್ತಮ ವಾತಾವರಣ ಸೃಷ್ಟಿಯಾದರೆ ಮಾತ್ರ ಹತೋಟಿಗೆ ಬರಬಹುದು. ಮುಂದಿನ ದಿನಗಳಲ್ಲಿ ಮತ್ತೆ ಮಳೆ ಸುರಿದರೆ ಈ ರೋಗದ ಕಾಟ ತಪ್ಪಿದ್ದಲ್ಲ.
ರೋಗಲಕ್ಷಣ
ಅಡಕೆ ಮರದ ಸೋಗೆ ಹಳದಿ ಬಣ್ಣಕ್ಕೆ ತಿರುಗಿ ಅದರಲ್ಲಿ ಕಂದು ಬಣ್ಣದ ಚುಕ್ಕೆಗಳು ಮೂಡುತ್ತವೆ. ಈ ರೀತಿಯ ಸಣ್ಣ ಚುಕ್ಕೆಗಳು ದೊಡ್ಡದಾಗಿ ಎಲ್ಲ ಸೋಗೆಗಳಿಗೆ ಹಬ್ಬಿ ಅದನ್ನು ಒಣಗಿಸುತ್ತದೆ. ಬಳಿಕ ಅಡಕೆ ಮರದ ಮೇಲ್ಭಾಗಕ್ಕೆ ಆವರಿಸಿ ಅದು ಒಣಗಿ ಹೋಗಿ ಮುರಿದು ಬೀಳುತ್ತದೆ.
ರೋಗ ಹತೋಟಿ ಕ್ರಮ ಒಂದು ಎಂಎಲ್ ಪ್ರೋಪಿಕೋನಝೋಲ್ 25 ಶೇ.ಇಸಿಯನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ರೋಗ ಹತೋಟಿಗೆ ಬರುತ್ತದೆ. ಇದನ್ನು ಆಗಾಗ ಮುಂದುವರಿಸಬೇಕು. ನಾಟಿ ಸಂದರ್ಭ ರೋಗ ರಹಿತ ಸಸಿಗಳ ಬಳಕೆ, ರೋಗಬಾಧಿತ ಸೋಗೆಗಳನ್ನು ತೆಗೆದು ನಾಶಪಡಿಸುವುದು, ತೋಟಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ಬಸಿಗಾಲುವೆ ನಿರ್ಮಾಣ, ಅವಶ್ಯಕತೆಯಷ್ಟೇ ಪ್ರಮಾಣ ನೀರನ್ನು ತೋಟಗಳಿಗೆ ನೀಡುವುದು, ಮಣ್ಣು ಪರೀಕ್ಷೆ, ಸಾವಯವ, ಹಸಿರೆಲೆ ಗೊಬ್ಬರ ಬಳಕೆ ಕಹಿಬೇವಿನ ಹಿಂಡಿ, ಹಟ್ಟಿಗೊಬ್ಬರ ಬಳಕೆಯಿಂದ ರೋಗವನ್ನು ಹತೋಟಿಗೆ ತರಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನಮ್ಮ ತೋಟದಲ್ಲಿ ಕಳೆದ ಎರಡು ತಿಂಗಳಿನಿಂದ ಎಲೆಚುಕ್ಕಿ ರೋಗ ಕಂಡುಬಂದಿದು,್ದ ಅದು ಮರದಿಂದ ಮರಕ್ಕೆ ಹಬ್ಬುತ್ತಿದೆ. ಇಲಾಖೆ ತಿಳಿಸಿದ ಔಷಧ ಸಿಂಪಡಣೆ, ಇತರ ಕ್ರಮಗಳನ್ನು ಕೈಗೊಂಡರೂ ರೋಗ ಹತೋಟಿಗೆ ಬಂದಿಲ್ಲ. ಈಗಾಗಲೇ 50ಕ್ಕಿಂತ ಅಧಿಕ ಮರಗಳು ನಾಶವಾಗಿ ನೂರಾರು ಮರಗಳಲ್ಲಿ ರೋಗಲಕ್ಷಣ ಕಂಡುಬರುತ್ತಿದೆ. ಇದು ಎಲೆಚುಕ್ಕಿ ರೋಗವೋ ಹಳದಿ ರೋಗವೋ ಎಂಬುದನ್ನು ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸುವ ಅಗತ್ಯವಿದೆ. ವಿಶ್ವನಾಥ ಲೋಂಢೆ, ಕೃಷಿಕ ಮುಂಡಾಜೆ https://www.vijayavani.net/mangalore-young-indians-yuva-badminton-tournament-2024