ಕೋಲಾರ: ಅಗಲಿದ ಅಪ್ಪು ಸ್ಮರಣಾರ್ಥ 'ಪುನೀತ್ ನಗರ' ಎಂದು ಹೆಸರಿಡಲಾಗಿದ್ದ ಬಡಾವಣೆಯ ನಾಮಫಲಕವನ್ನು ಧ್ವಂಸಗೊಳಿಸಿದ ಪ್ರಕರಣ ಕೋಲಾರದಲ್ಲಿ ನಡೆದಿದೆ. ಪರಿಣಾಮವಾಗಿ ಸ್ಥಳದಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೋಲಾರದ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಪುರಸಭೆಯ ಮಾಜಿ ಸದಸ್ಯ ಮುರುಗಯ್ಯ ಎಂಬವರು ಬಡಾವಣೆಯೊಂದನ್ನು ನಿರ್ಮಿಸಿದ್ದು, ಅದಕ್ಕೆ ಯಾವುದೇ ಹೆಸರಿಟ್ಟಿರಲಿಲ್ಲ. ಆ ಬಡಾವಣೆಗೆ ಪುನೀತ್ ರಾಜಕುಮಾರ್ ಅವರ ಹೆಸರು ಇಡುವ ಸಂಬಂಧ ಸ್ಥಳೀಯ ಕೆಲವರು ಕೆಸರನಹಳ್ಳಿ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಪಂಚಾಯಿತಿಯಿಂದ ಲಿಖಿತ ಅನುಮತಿ ನೀಡದಿದ್ದರೂ ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಸಾರ್ವಜನಿಕರು ಆ ಬಡಾವಣೆಗೆ 'ಪುನೀತ್ ನಗರ' ಎಂದು ಅಪ್ಪು ಫೋಟೋ ಸಹಿತ ನಾಮಕರಣ ಮಾಡಿದ್ದರು.
ಆದರೆ ಬಡಾವಣೆ ನಿರ್ಮಾಣ ಮಾಡಿದ್ದ ಮುರುಗಯ್ಯ ಈ ವಿಷಯ ತಿಳಿದು, ಬಡಾವಣೆಯಲ್ಲಿ ಅಳವಡಿಸಲಾಗಿದ್ದ ಪುನೀತ್ ನಗರ ಎಂಬ ನಾಮಫಲಕವನ್ನು ಜೆಸಿಬಿ ಮೂಲಕ ಕಿತ್ತು ಹಾಕಿಸಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ನಾಮಫಲಕ ತೆರವುಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದ ಬಂಗಾರಪೇಟೆ ಪೊಲೀಸರು ಜನರನ್ನು ಚದುರಿಸಿ ಸಮಾಧಾನ ಪಡಿಸಿ, ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.