ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ವತಿಯಿಂದ ಕಾಲೇಜಿನ ಪದವಿ ಹಾಗೂ ಪದವಿಪೂರ್ವ ಅರ್ಹ ವಿದ್ಯಾರ್ಥಿಗಳಿಗೆ, ಶ್ರೀ ರಾಘವೇಂದ್ರ ಕೂಡಿಗೆ ಶೆಣೈ ಅವರ ತಾಯಿ ಸವಿತಾ ಕೂಡಿಗೆ ಶೆಣೈ ಅವರ ಸ್ಮರಣಾರ್ಥ ನೀಡಲಾಗುವ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು.
ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಫಲಾನುಭವಿ ವಿದ್ಯಾರ್ಥಿಗಳಿಗೆ ಕಾರ್ಡ್ ವಿತರಿಸಿ ಮಾತನಾಡಿ, ದೂರದೂರುಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಈ ಯೋಜನೆ ಜಾರಿಗೊಳಿಸಿರುವುದು ಅಭಿನಂದನೀಯ ಎಂದರು.
ಡಾ.ಸುಯೋಗವರ್ಧನ್ ಡಿ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ಬಳಿಕ ಕಾರಣಾಂತರಗಳಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆಡಳಿತ ಮಂಡಳಿಯ ತೀರ್ಮಾನದಂತೆ ಈ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದೆ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಮನೋಹರ ಶಾಂತಪ್ಪ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.