ಜಿಲ್ಲೆ

ಲಾಠಿ ಚಾರ್ಜ್ ಪ್ರಶ್ನಿಸಿ ಪಿಐಎಲ್

kumarvrl

ಬೆಂಗಳೂರು: ಲಾಕ್​ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬರುವ ಜನರ ಮೇಲೆ ಲಾಠಿ ಚಾರ್ಜ್ ನಡೆಸದಂತೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸದಂತೆ ಪೊಲೀಸರಿಗೆ ನಿರ್ದೇಶಿಸಲು ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಸಾಧ್ಯವಾದಷ್ಟು ಸರ್ಕಾರದ ಸೂಚನೆಗಳನ್ನು ಪಾಲಿಸುತ್ತಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ ಹಾಗೂ ವೈದ್ಯಕೀಯ ಸೇವೆ ಪಡೆಯಲು ಮನೆಗಳಿಂದ ಹೊರಬರುತ್ತಿದ್ದಾರೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸುತ್ತಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಯಾರಾದರೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿರುವುದು ಕಂಡರೆ, ಪೊಲೀಸರು ಪೂರ್ವಾಪರ ವಿಚಾರಿಸದೆ ಲಾಠಿಚಾರ್ಜ್ ಮಾಡುತ್ತಿ ದ್ದಾರೆ. ಹಾಲು, ದಿನಪತ್ರಿಕೆ ಹಂಚುವ ವರಿಗೆ, ತರಕಾರಿ ವ್ಯಾಪಾರಿಗಳಿಗೆ ಥಳಿಸಿದ ಘಟನೆಗಳೂ ನಡೆದಿವೆ.

ವೈದ್ಯಕೀಯ ಸೇವೆ ನೀಡಲು ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೈದ್ಯರ ಮೇಲೂ ಪೊಲೀಸರು ಲಾಠಿ ಬೀಸಿದ್ದಾರೆ. ಈ ಎಲ್ಲ ಸೇವೆಗಳನ್ನು ಅಗತ್ಯ ಸೇವೆಗಳೆಂದು ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೂ, ಪೊಲೀಸರು ಈ ರೀತಿ ವರ್ತಿಸುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.