ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಿನ್ನಿಗೋಳಿ ಯುಗಪುರುಷದ ಸಂಸ್ಥಾಪಕ ದಿ.ಕೊ.ಅ.ಉಡುಪ ಸಂಸ್ಮರಣಾ ಸಮಾರಂಭ, ಕೊ.ಅ.ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸನ್ಮಾನ, ಕೃತಿ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ.ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿ ದಿ.ಕೊ.ಅ.ಉಡುಪ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಕೃಷಿಕ, ಉತ್ತಮ ಗುರು, ಸಾಂಸ್ಕೃತಿಕ ರಾಯಭಾರಿ, ಅಜಾತಶತ್ರುವಾಗಿದ್ದು ಅವರ ಸಾಧನೆಗಳು ಕಾಲಕಾಲಕ್ಕೂ ಪ್ರಸ್ತುತ ಎಂದರು.
ಉಳೆಪಾಡಿ ದೇವಸ್ಥಾನ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಅವರಿಗೆ ಕೊ.ಅ.ಉಡುಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಡಪದವು ರಾಧಾಕೃಷ್ಣ ತಂತ್ರಿ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಎಂ.ವಿ.ಭಟ್ ರಚಿತ ‘ಆಧುನಿಕ ಭಾರತ’ ಕೃತಿ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀನಾಥ ಎಂ.ಪಿ. ಬಿಡುಗಡೆಗೊಳಿಸಿದರು. ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ವಿರಾರ್ ಶಂಕರ್ ಶೆಟ್ಟಿ, ಕೆ.ಪಿ.ಸುದರ್ಶನ್, ಕಸ್ತೂರಿ ಪಂಜ, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಉದ್ಯಮಿ ಪೃಥ್ವಿರಾಜ ಆಚಾರ್ಯ, ಬಾಲಕೃಷ್ಣ ಉಡುಪ ಉದ್ಯಮಿ, ಸುಧಾಕರ ಆಳ್ವ, ವರಿಷ್ಠ ಅಂಚೆಪಾಲಕ ಶ್ರೀನಾಥ್ ಬಸ್ರೂರು, ಡಾ.ನಯನಾಭಿರಾಮ ಉಡುಪ, ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಪು.ಗುರುಪ್ರಸಾದ್ ಭಟ್, ಅನುಷಾ ಕರ್ಕೇರಾ ಸನ್ಮಾನ ಪತ್ರ ವಾಚಿಸಿದರು. ಭುವನಾಭಿರಾಮ ಉಡುಪ ಸ್ವಾಗತಿಸಿ, ಪತ್ರಕರ್ತ ಶರತ್ ಶೆಟ್ಟಿ ನಿರೂಪಿಸಿದರು.