ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಹೆಜಮಾಡಿ ಕೆ.ಕೆ.ಆರ್ ಟೋಲ್ ಪ್ಲಾಜಾದಲ್ಲಿ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳ ಮಾಲೀಕರು ವಾಹನದ ಆರ್.ಸಿ ಪ್ರತಿ ಸಲ್ಲಿಸಲು ಆಗಸ್ಟ್ 31ರ ತನಕ ಗಡುವು ವಿಸ್ತರಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಟೋಲ್ ವಿರೋಧಿ ಹೋರಾಟ ಸಮಿತಿ ಪ್ರಬಂಧಕ ತಿಮ್ಮಯ್ಯ, ಜಿಲ್ಲಾಡಳಿತ ಸೂಚನೆ ಅನ್ವಯ ಹಿಂದಿನಂತೆ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲು ಸಂಸ್ಥೆ ಬದ್ಧವಾಗಿದೆ. ಅದರೆ ಹೆಜಮಾಡಿ ಗ್ರಾಮವೊಂದರಲ್ಲೇ 2000ಕ್ಕೂ ಹೆಚ್ಚು ಹೊಸ ವಾಹನಗಳು ಜುಲೈನಲ್ಲಿ ಟೋಲ್‌ನಲ್ಲಿ ಸಂಚರಿಸಿವೆ. ಇದರಲ್ಲಿ ಹೆಚ್ಚು ನಕಲಿ ದಾಖಲೆಗಳಾಗಿರಬಹುದೆಂಬ ಸಂಶಯವಿದು, ಸ್ಥಳೀಯ ವಾಹನಗಳು ಆರ್.ಸಿ. ಪ್ರತಿ ಒದಗಿಸಿದರೆ ಕಂಪ್ಯೂಟರ್ ಮೂಲಕ ದಾಖಲೆ ಸಂಗ್ರಹಿಸಿ ಅರ್ಹರಿಗೆ ವಿನಾಯಿತಿ ನೀಡಲು ಸಾಧ್ಯವಾಗುತ್ತದೆ. ಸಮಿತಿಯ ಬೇಡಿಕೆಯಂತೆ ದಾಖಲೆ ಪ್ರತಿ ಒದಗಿಸಲು 31ರವರೆಗೆ ಕಾಲಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ಪಾಂಡುರಂಗ ಕರ್ಕೇರ, ಮಧು ಅಚಾರ್ಯ ಮೂಲ್ಕಿ, ಸುಧೀರ್ ಕರ್ಕೇರ, ತೇಜಪಾಲ್ ಸುವರ್ಣ, ಸಂತೋಷ್ ಪಡುಬಿದ್ರಿ, ರಮೀಝ್ ಹುಸೈನ್, ಖಾದರ್ ಹೆಜ್ಮಾಡಿ, ಪ್ರಾಣೇಶ್ ಹೆಜ್ಮಾಡಿ, ವಿಕ್ರಮ್‌ರಾಜ್ ಸುವರ್ಣ, ಅಹಮದ್ ಕಬೀರ್, ಅಬ್ದುಲ್ ರೆಹ್ಮಾನ್, ಹನೀಫ್ ಕನ್ನಂಗಾರ್, ಕಾಸಿಂ ಉಪಸ್ಥಿತರಿದ್ದರು.
ಬಂಟ್ವಾಳದ ಯುವಕನೊಬ್ಬ ಟೋಲ್‌ನಲ್ಲಿ ಮಂಗಳವಾರ ದಾಂಧಲೆ ನಡೆಸಿದ್ದು, ಘಟನೆ ಬಳಿಕ ಟೋಲ್ ಮುಖ್ಯಸ್ಥರು ವಿನಾಯಿತಿ ಹೊಂದಿದ ಸ್ಥಳಿಯ ವಾಹನಗಳ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಂಪೂರ್ಣ ಟೋಲ್ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳು ತಮ್ಮ ಆರ್.ಸಿ. ಪ್ರತಿಯನ್ನು ಆ.10ರೊಳಗೆ ಟೋಲ್ ಕಚೆೇರಿಯಲ್ಲಿ ನೀಡುವಂತೆ ಬ್ಯಾನರ್ ಮೂಲಕ ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಲಭ್ಯವಾಗದಿರುವುದರಿಂದ ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜ್ಮಾಡಿ ನೇತೃತ್ವದಲ್ಲಿ ಟೋಲ್ ಪ್ರಬಂಧಕ ತಿಮ್ಮಯ್ಯ ಎ.ಎಸ್. ಅವರನ್ನು ಶುಕ್ರವಾರ ಭೇಟಿಯಾಗಿ ಸಮಾಲೋಚನೆ ನಡೆಸಿತ್ತು.