ಜಿಲ್ಲೆ

ಬೆಳ್ಳಿಪ್ಪಾಡಿ ಗ್ರಾಮದ ವಿವಿಧ ಕಡೆಗಳಲ್ಲಿ ಧರೆ ಕುಸಿತ : ಎರಡು ಮನೆಗಳಿಗೆ ಹಾನಿ, ಇಬ್ಬರಿಗೆ ಗಾಯ

ಪುತ್ತೂರು ಗ್ರಾಮಾಂತರ: ಮಳೆಯಿಂದಾಗಿ ಕೋಡಿಂಬಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಬೆಳ್ಳಿಪ್ಪಾಡಿ ಗ್ರಾಮದ ವಿವಿಧ ಕಡೆಗಳಲ್ಲಿ ಧರೆ ಕುಸಿದು ಮನೆಗೆ ಹಾನಿಯಾಗಿದೆ.

ಕೊಡಪಟ್ಯ ಎಂಬಲ್ಲಿ ಕೃಷ್ಣಯ್ಯ ಆಚಾರ್ಯರ ಮನೆ ಮೇಲೆ ಶುಕ್ರವಾರ ಮಧ್ಯರಾತ್ರಿ ವೇಳೆ ಧರೆ ಕುಸಿದು ಮನೆಗೆ ಬಹಳಷ್ಟು ಹಾನಿ ಸಂಭವಿಸಿದೆ. ಮನೆಯ ಗೋಡೆ ಕುಸಿದು ಮಣ್ಣು ಮನೆಯೊಳಗೆ ಬಿದ್ದಿದೆ. ಮನೆಯೊಳಗಿದ್ದ ಸಾಮಗ್ರಿಗಳು ನಾಶಗೊಂಡಿದೆ. ಸ್ವಲ್ಪ ಧರೆ ಕುಸಿದ ಹಾಗೂ ಹೆಚ್ಚಿನ ಮಣ್ಣು ಕುಸಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಕೃಷ್ಣಯ್ಯ ಆಚಾರ್ಯ ಕುಟುಂಬ ಪಕ್ಕದ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ಹಿನ್ನೆಲೆಯಲ್ಲಿ ಪ್ರಾಣಾಪಾಯ ತಪ್ಪಿದೆ. ಕಠಾರ ಕೂಟೇಲು ಕಡೆಗೆ ಸಂಪರ್ಕ ಕಲ್ಪಿಸುವ ಸಕಲೇಶ್ವರ ದೇವಸ್ಥಾನದ ಸಮೀಪದ ಗುತ್ತಿನ ಮನೆ ಎಂಬಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಮಣ್ಣು ಬಿದ್ದು ಸಂಪರ್ಕ ಕಡಿತಗೊಂಡಿದೆ. ಮೇಲ್ಭಾಗದ ಎರಡು ಮನೆಗಳಿಗೆ ಅಪಾಯದ ಸ್ಥಿತಿ ಉಂಟಾಗಿದೆ. ಬೆಳ್ಳಿಪ್ಪಾಡಿ ಗ್ರಾಮದ ಜೇಡರಪಾಲು ನಿವಾಸಿ ಉಗ್ಗಪ್ಪ ಪೂಜಾರಿ ಅವರ ಮನೆಯ ಮೇಲೆ ಧರೆ ಕುಸಿದು ಮನೆ ಹಾನಿಗೊಂಡಿದೆ. ಕೊಡಿಮರ ಎಂಬಲ್ಲಿ ಧರೆ ಕುಸಿದು ಪೂವಪ್ಪ ನಾಯ್ಕ ಎಂಬುವರ ಮನೆಗೆ ಹಾನಿಯಾಗಿದೆ.